ದಕ್ಷಿಣ ಕನ್ನಡ/ಪುತ್ತೂರು: ವಲಸೆ ಕಾರ್ಮಿಕರನ್ನು ದುಡಿಸಿಕೊಂಡು, ಅವರು ಊರಿಗೆ ಹೊರಟಾಗ ಕಾರ್ಮಿಕರ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹಿತಿ ನೀಡದ ಮಾಲೀಕರ ಹಾಗೂ ಕಟ್ಟಡ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಎಚ್ಚರಿಸಿದ್ದಾರೆ.
ವಲಸೆ ಕಾರ್ಮಿಕರನ್ನು ಬೇಕಾಬಿಟ್ಟಿಯಾಗಿ ತಾಲೂಕು ಕಚೇರಿ ಹಾಗೂ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಬಿಟ್ಟು ಹೋಗುತ್ತಿರುವ ಘಟನೆಗಳು ನಡೆಯುತ್ತಿವೆ. ವರ್ಷಪೂರ್ತಿ ಈ ಕಾರ್ಮಿಕರನ್ನು ದುಡಿಸಿಕೊಂಡು ಇದೀಗ ಅವರ ಮಾಹಿತಿ ನೀಡದೆ ಬಿಟ್ಟು ಹೋಗುತ್ತಿರುವುದು ಸರಿಯಲ್ಲ. ಇಂತಹ ತೋರುತ್ತಿರುವ ಮಾಲೀಕರ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ವಲಸೆ ಕಾರ್ಮಿಕರ ಬಗ್ಗೆ ಮಾಲೀಕರು ಹಾಗೂ ಗುತ್ತಿಗೆದಾರರು ಪುತ್ತೂರು ತಹಶೀಲ್ದಾರ್ ಗಮನಕ್ಕೆ ತರಬೇಕು. ಊರಿಗೆ ಹೊರಟ ಕಾರ್ಮಿಕರನ್ನು ತಹಶೀಲ್ದಾರ್ ಅವರಿಂದ ಮಾಹಿತಿ ಪಡೆದುಕೊಂಡು ಪ್ರಯಾಣದ ವ್ಯವಸ್ಥೆ ಮಾಡಿದ ದಿನದಂದು ಕರೆ ತರಬೇಕು. ವಲಸಿಗ ಕಾರ್ಮಿಕರನ್ನು ಮಾನವೀಯ ದೃಷ್ಟಿಯಿಂದ ನೋಡುಬೇಕು ಎಂದರು.
ಸೋಮವಾರ ಬಲ್ನಾಡು ಗ್ರಾಮದಲ್ಲಿ ಗೇರುಬೀಜ ಆಯುವ 5 ಮಂದಿ ವಲಸೆ ಕಾರ್ಮಿಕರು, 7 ಕಿ.ಮೀ ನಡೆದುಕೊಂಡು ಬಂದು ಈಗ ಸಮುದಾಯಭವನದಲ್ಲಿ ಆಶ್ರಯ ಪಡೆದಿದ್ದಾರೆ. ಯೂಸುಫ್ ಎಂಬ ಗುತ್ತಿಗೆದಾರ ಈ ಕಾರ್ಮಿಕರಿಗೆ ಯಾವುದೇ ವ್ಯವಸ್ಥೆ ಕಲ್ಪಿಸಿರಲಿಲ್ಲ. ಊಟದ ವ್ಯವಸ್ಥೆಗೂ ತತ್ವಾರ ಉಂಟಾಗಿದ್ದು, ಇವರು ತಮ್ಮಲ್ಲಿದ್ದ ಹಣದಿಂದಲ್ಲೇ ಊಟದ ವ್ಯವಸ್ಥೆ ಮಾಡಿಕೊಂಡಿದ್ದರು ಎಂದು ಹೇಳಿದರು.
ಭಾನುವಾರ ಸಂಜೆ ಸುರಿದ ಗಾಳಿ ಮಳೆಗೆ ನಾವು ಸಂಕಷ್ಟಕ್ಕೆ ಸಿಲುಕಿದ್ದೇವು. ಗುತ್ತಿಗೆದಾರ ಯಾವುದೇ ನೆರವು ನೀಡಿರಲಿಲ್ಲ. ಕನಿಷ್ಠ ಆಹಾರದ ಕಿಟ್ ಕೂಡಾ ನೀಡಿಲ್ಲ ಎಂದು ಕಾರ್ಮಿಕ ಸಣ್ಣ ಮೈಲಾರಪ್ಪ ಅಲವತ್ತುಕೊಂಡರು.
ನಗರ ಸಭೆಯ ಸಮುದಾಯ ಭವನದಲ್ಲಿ ಸದ್ಯ 20 ವಲಸೆ ಕಾರ್ಮಿಕರಿಗೆ ಆಶ್ರಯ ನೀಡಲಾಗಿದೆ. ಇವರಿಗೆ ಮಾಸ್ಕ್ ಹಾಗೂ ಊಟದ ವ್ಯವಸ್ಥೆ ಒದಗಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಪರಿಸರ ಅಭಿಯಂತರ ಗುರುಪ್ರಸಾದ್ ಮಾಹಿತಿ ನೀಡಿದರು.
ಈಗಾಗಲೇ 350ಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲಾಗಿದೆ. ಮತ್ತೆ 315 ಮಂದಿ ಕಾರ್ಮಿಕರು ಊರಿಗೆ ಹೋಗುವ ಬಗ್ಗೆ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಜತೆ ಚರ್ಚೆ ಮಾಡಿ ಅವರನ್ನು ಮಂಗಳವಾರ ಸಂಜೆ 15 ಬಸ್ಗಳ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.