ನೆಲ್ಯಾಡಿ(ದಕ್ಷಿಣ ಕನ್ನಡ): ಕಡಬ ತಾಲೂಕಿನ ನೆಲ್ಯಾಡಿಯ ಕೊಣಾಲು ಎಂಬಲ್ಲಿ ಆ್ಯಸಿಡ್ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆ ಬಿಜು ಎಂಬಾತ ಪತ್ನಿ ಶೈನಿ (33) ಮತ್ತು ಆಕೆಯ ಚಿಕ್ಕಮ್ಮ ಜಾನ್ಸಿ (36) ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ
ಬಿಜು ಮತ್ತು ಪತ್ನಿ ಶೈನಿ ನಡುವೆ ಗಲಾಟೆ ನಡೆದು, ಶೈನಿ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿರುವ ತನ್ನ ತಂದೆಯ ತಮ್ಮನ ಮನೆಯಲ್ಲಿ ಮಗಳ ಜೊತೆಗೆ ವಾಸವಾಗಿದ್ದರು. ಅಲ್ಲಿಂದ ತನ್ನ ಚಿಕ್ಕಮ್ಮ ಝಾನ್ಸಿಯ ಜೊತೆಗೆ ನೆಲ್ಯಾಡಿಯ ಆಶ್ರಮವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಎಂದಿನಂತೆ ಇಂದು ಬೆಳಿಗ್ಗೆ 6 ಗಂಟೆಯ ವೇಳೆಗೆ ಶೈನಿ ಹಾಗೂ ಝಾನ್ಸಿ ಮನೆಯಿಂದ ಕೆಲಸಕ್ಕೆ ಹೋಗಲೆಂದು ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾದು ಕುಳಿತಿದ್ದ ಆರೋಪಿ ಬಿಜು, ಇಬ್ಬರ ಮೇಲೂ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಸುದ್ದಿ ತಿಳಿಯುತ್ತಲೇ ಶೈನಿಯವರ ಚಿಕ್ಕಪ್ಪ ಏಲಿಯಸ್ ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ರಿಕ್ಷಾದಲ್ಲಿ ನೆಲ್ಯಾಡಿಯ ಆಸ್ಪತ್ರೆಯೊಂದಕ್ಕೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.