ಮಂಗಳೂರು: ರಿಜಿಸ್ಟರ್ ಪೋಸ್ಟ್ ಬಟವಾಡೆ ಮಾಡಲು ಹೋದ ಪೋಸ್ಟ್ಮ್ಯಾನ್ಗೆ ನಿಂದನೆ ಹಾಗೂ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ 6ನೇ ಜೆಎಂಎಫ್ಸಿ ನ್ಯಾಯಾಲಯ ಅಪರಾಧಿ ಯುವಕನಿಗೆ 10 ತಿಂಗಳ ಸಾದಾ ಸಜೆ ಹಾಗೂ 2,500 ರೂ. ದಂಡ ವಿಧಿಸಿ ಆದೇಶಿಸಿದೆ.
2020ರ ಜೂನ್ 16ರ ಬೆಳಗ್ಗೆ ಬೋಳೂರಿನ ಮಠದಕಣಿ ರಸ್ತೆಯ ಮನೆಯಲ್ಲಿರುವ ಆರೋಪಿ ಮನೀಶ್ ಮನೆಗೆ ರಿಜಿಸ್ಟರ್ ಪೋಸ್ಟ್ ಬಟವಾಡೆ ಮಾಡಲು ಪೋಸ್ಟ್ಮ್ಯಾನ್ ದಿನೇಶ್ ಅವರು ಹೋಗಿದ್ದರು. ಆ ಸಂದರ್ಭದಲ್ಲಿ ಆರೋಪಿ ಮನೀಶ್ ಅವಾಚ್ಯ ಪದಗಳಿಂದ ನಿಂದಿಸಿ, ಪೋಸ್ಟ್ಮ್ಯಾನ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದ. ಅಲ್ಲದೇ ಅಂಚೆ ಇಲಾಖೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಹರಿದು ಹಾಕಿ ದಿನೇಶ್ ಅವರ ಬೈಕ್ನ್ನು ರಾಡ್ನಿಂದ ಜಖಂಗೊಳಿಸಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬರ್ಕೆ ಠಾಣೆಯ ಅಂದಿನ ಉಪನಿರೀಕ್ಷಕ ಹಾರೂನ್ ಅಖ್ತರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ 6ನೇ ಜೆಎಂಎಫ್ಸಿ ನ್ಯಾಯಾಲಯ ವಾದ, ಪ್ರತಿವಾದ ಆಲಿಸಿ ಆರೋಪಿ ತಪ್ಪಿತಸ್ಥನೆಂದು ಘೋಷಿಸಿ, ಶಿಕ್ಷೆ ಪ್ರಕಟಿಸಿದೆ.
ಮಂಗಳೂರಿನ 6ನೇ ಜೆಎಂಎಫ್ಸಿ ನ್ಯಾಯಾಧೀಶರಾದ ಪೂಜಾಶ್ರೀ ಹೆಚ್.ಎಸ್. ಅವರು ಅಪರಾಧಿಗೆ 10 ತಿಂಗಳ ಸಾದಾ ಸಜೆ ಹಾಗೂ 2,500 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದರು.
ಇದನ್ನೂ ಓದಿ: ಮಗು ನೋಡಲು ಬಯಸುವ ವಿಚ್ಛೇದಿತ ಪತಿಗೆ ಆತಿಥ್ಯ ನೀಡುವ ಅವಶ್ಯಕತೆ ಇಲ್ಲ: ಹೈಕೋರ್ಟ್ ಮಹತ್ವದ ತೀರ್ಪು