ಮಂಗಳೂರು: ಡಿ.ಕೆ.ಶಿವಕುಮಾರ್ ಅವರಿಗೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕಿನ ಬೆಳ್ಳಾರೆಯ ಗಿರಿಧರ್ ರೈ ಎಂಬವರಿಗೆ ನಾಲ್ಕು ಅಪರಾಧಗಳಲ್ಲಿ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಒಂದು ಪ್ರಕರಣದಲ್ಲಿ 5 ಸಾವಿರ ರೂ. ದಂಡ ವಿಧಿಸಿರುವ ನ್ಯಾಯಾಲಯ ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಗಿರಿಧರ್ ರೈ 2016ರ ಫೆ. 28ರಂದು ಅಂದಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ಗೆ ವಿದ್ಯುತ್ ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿದ್ದ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಮೆಸ್ಕಾಂ ಎಂಡಿ ಮೂಲಕ ಗಿರಿಧರ್ ವಿರುದ್ಧ ಪೊಲೀಸ್ ಕೇಸು ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾತ್ರೋರಾತ್ರಿ ಗಿರಿಧರ್ ರೈ ಅವರನ್ನು ಬಂಧಿಸಿದ್ದರು. ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಮಾನ ಹಾನಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ನಾಲ್ಕು ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆಗೆ ಸುಳ್ಯ ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಡಿಕೆಶಿಗೆ ಮೂರು ಬಾರಿ ಸಮನ್ಸ್, ಒಂದು ಬಾರಿ ವಾರೆಂಟ್ ಜಾರಿ ಮಾಡಲಾಗಿತ್ತು. 2021ರ ಸೆ. 29ರಂದು ಅವರು ಸುಳ್ಯ ಕೋರ್ಟ್‌ಗೆ ಹಾಜರಾಗಿದ್ದರು.
ಇದನ್ನೂ ಓದಿ: 'ದಿಂಗಾಲೇಶ್ವರ ಶ್ರೀಗಳು ಕಮಿಷನ್ ಬಗ್ಗೆ ದಾಖಲೆ ಕೊಡಲಿ, ಸಂಪೂರ್ಣ ತನಿಖೆ ಮಾಡ್ತೇವೆ'