ಮಂಗಳೂರು (ದಕ್ಷಿಣ ಕನ್ನಡ): ಸೌದಿ ಅರೇಬಿಯಾದ ರಿಯಾದ್ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಈ ಘಟನೆ ರಿಯಾದ್ನ ಖುರೈಸ್ ರಸ್ತೆಯ ಬಳಿ ನಿನ್ನೆ ನಡೆದಿದೆ. ಹಳೆಯಂಗಡಿ ಕದಿಕೆ ನಿವಾಸಿ ರಿಜ್ವಾನ್, ಸುರತ್ಕಲ್ ಕೃಷ್ಣಾಪುರದ ಅಕೀಲ್, ಮಂಗಳೂರಿನ ನಾಸಿರ್ ಮೃತಪಟ್ಟಿದ್ದು, ಇವರ ಜೊತೆಗೆ ಪ್ರಯಾಣಿಸುತ್ತಿದ್ದ ಬಾಂಗ್ಲಾ ಪ್ರಜೆ ಶಿಹಾಬ್ ಎಂಬಾತನು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ನಾಲ್ವರು ನಾಲ್ಕು ತಿಂಗಳ ಹಿಂದೆಯಷ್ಟೆ ರಿಯಾದ್ಗೆ ತೆರಳಿದ್ದರು. ರಿಯಾದ್ನಲ್ಲಿ ಇಕಾಮ್ (ರೆಸಿಡೆನ್ಸಿಯಲ್ ಪ್ರಮಾಣ ಪತ್ರ) ಪಡೆಯುವ ಪ್ರಕ್ರಿಯೆಗಾಗಿ ಕಾರಿನಲ್ಲಿ ತೆರಳುತ್ತಿದ್ದರು. ನಾಲ್ವರು ಕಾರಿನಲ್ಲಿ ಹೋಗುತ್ತಿದ್ದಾಗ ಖುರೈಸ್ ರಸ್ತೆಯ ಬಳಿ ಒಂಟೆಗೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದವರು SAQCO ಎಂಬ ಕಂಪನಿಯಲ್ಲಿ ಕಾರ್ಮಿಕರಾಗಿದ್ದರು. ಅಕೀಲ್ ಅವರು ಮಂಗಳೂರಿನ ಸುರತ್ಕಲ್ ಕೃಷ್ಣಾಪುರ ನಿವಾಸಿಯಾಗಿದ್ದು, ರಿಝ್ವಾನ್ ಹಳೆಯಂಗಡಿ ಕದಿಕೆ ನಿವಾಸಿ ಮತ್ತು ನಾಸಿರ್ ಮಂಗಳೂರಿನ ನಿವಾಸಿಯಾಗಿದ್ದಾರೆ. ಮೃತದೇಹಗಳನ್ನು ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ.
ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿ ಬಳಿಯ ನಿವಾಸಿ ರಿಝ್ವಾನ್ ಅವರು, 4 ತಿಂಗಳ ಹಿಂದಷ್ಟೇ ಉದ್ಯೋಗ ನಿಮಿತ್ತ ಸೌದಿ ಅರೆಬಿಯಾಕ್ಕೆ ತೆರಳಿದ್ದರು. ಇವರು ಬದ್ರುದ್ದೀನ್ ಮತ್ತು ಅಲೀಮಾ ದಂಪತಿಯ ನಾಲ್ಕು ಮಂದಿ ಮಕ್ಕಳ ಪೈಕಿ ಓರ್ವನಾಗಿದ್ದಾರೆ. ಇವರ ಬಾವ ಅಬ್ದುಲ್ ರಝಾಕ್ ಪ್ರತಿಕ್ರಿಯಿಸಿ, ಘಟನೆಯ ಬಳಿಕ ಅಲ್ಲಿ ನೆಲೆಸಿರುವ ಸ್ಥಳೀಯರೊಂದಿಗೆ ಸಂಪರ್ಕದಲ್ಲಿದ್ದೇವೆ. ಮೃತದೇಹವನ್ನು ಇಲ್ಲಿಗೆ ತರುವ ಬಗ್ಗೆ ಇನ್ನೂ ತೀರ್ಮಾನ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ್ ರನ್: ಮತ್ತೊಂದು ಹಿಟ್ ಅಂಡ್ ರನ್ ಕೇಸ್ ಬೆಂಗಳೂರಿನಲ್ಲಿ ಫೆಬ್ರವರಿ 2 ರ ಮಧ್ಯಾಹ್ನ 1.30ರ ಸುಮಾರಿಗೆ ನಡೆದಿದೆ. ಕಾಲೇಜು ಯುವತಿಗೆ ಭೀಕರವಾಗಿ ಗುದ್ದಿ, ಕಾರು ಚಾಲಕ ಪರಾರಿಯಾಗಿದ್ದಾನೆ. ಇದು ಡಿಸೆಂಬರ್ 31ರಂದು ರಾತ್ರಿ ದೆಹಲಿಯಲ್ಲಿ ನಡೆದ ಕಾಂಜಾವಾಲ ಪ್ರಕರಣವನ್ನು ನೆನಪು ಮಾಡಿತು. ಅಲ್ಲದೇ ಇತ್ತೀಚೆಗೆ ಯುವಕನೊಬ್ಬ ಕಾರಿಗೆ ಗುದ್ದಿ ಕಾರು ಚಾಲಕನನ್ನು ಸ್ಕೂಟಿಯಲ್ಲಿ ಸುಮಾರು ಒಂದು ಕಿಲೋ ಮೀಟರ್ವರೆಗೆ ಎಳೆದುಕೊಂಡು ಹೋದ ಪ್ರಕರಣವೂ ನಡೆದಿತ್ತು. ಈ ಘಟನೆಗಳು ಮಾಸುವ ಹೊತ್ತಿನಲ್ಲಿ ಮತ್ತೊಂದು ಪ್ರಕರಣ ನಡೆದಿದೆ.
ಹುಬ್ಬಳ್ಳಿ ಮೂಲದ ಸ್ವಾತಿ ಪಟ್ಟಣಗೆರೆಯ ಪಿಜಿಯಲ್ಲಿ ವಾಸವಿದ್ದು, ಬಿಐಎಂಎಸ್ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದರು ಎಂದು ತಿಳಿದು ಬಂದಿದ್ದು ಅಪಘಾತದಲ್ಲಿ ಸ್ವಾತಿಯ ತಲೆ, ಮೈ-ಕೈಗೆ ತೀವ್ರ ಗಾಯಗಳಾಗಿವೆ. ಸ್ವಾತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಹಿಟ್ ಅಂಡ್ ರನ್ ಮಾಡಿ ಪರಾರಿಯಾದ ಕಾರು ಚಾಲಕ ಕೃಷ್ಣಭಾರ್ಗವ್ (20) ನನ್ನು ಕೆಂಗೇರಿ ಸಂಚಾರಿ ಠಾಣಾ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಆರ್ಆರ್ ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಆರೋಪಿ ಕೃಷ್ಣ ಭಾರ್ಗವ್ ಅಪಘಾತವೆಸಗಿದ ಬಳಿಕ ತಲೆಮರೆಸಿಕೊಂಡಿದ್ದರು. ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ .. ಯುವತಿಗೆ ಗಂಭೀರ ಗಾಯ, ಆರೋಪಿ ಬಂಧನ