ಉಳ್ಳಾಲ (ಮಂಗಳೂರು): ಕುತ್ತಾರು ಮದನಿನಗರ ಬಳಿ ಶುಕ್ರವಾರ ತಡರಾತ್ರಿ ಸರಣಿ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ದೇರಳಕಟ್ಟೆ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರೊಂದು ಎದುರಿನಿಂದ ಬರುತ್ತಿದ್ದ ಆಟೋಗೆ ಡಿಕ್ಕಿಯಾಗಿದೆ. ಬಳಿಕ ವೈದ್ಯಕೀಯ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರಿಗೂ ಗುದ್ದಿದೆ.
ಅಪಘಾತದ ರಭಸಕ್ಕೆ ಆಟೋ ಚಾಲಕ ಬದ್ಯಾರು ನಿವಾಸಿ ನೌಷಾದ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆಯಲ್ಲಿ ಎರಡು ಕಾರುಗಳು ಜಖಂಗೊಂಡಿದ್ದು, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಘಟನೆ ನಡೆದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಕಾರು ಚಾಲಕ ಮದ್ಯಪಾನ ಮಾಡಿದ್ದ ಎಂದು ಸ್ಥಳೀಯರು ಆರೋಪಿಸಿದ್ದು, ಕಾರನ್ನು ನಾಗುರಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದಲ್ಲದೆ ಅಪಘಾತವಾದ ಸ್ಥಳದಲ್ಲಿ ರಸ್ತೆಯೂ ಗುಂಡಿಗಳಿಂದ ತುಂಬಿದ್ದು, ಇದೂ ಸಹ ಅಪಘಾತಕ್ಕೆ ಕಾರಣವಾಗಿರಬಹುದು ಎಂಬುದು ಸ್ಥಳೀಯರ ಮಾತಾಗಿದೆ.