ಉಪ್ಪಿನಂಗಡಿ : ಒಎಲ್‌ಎಕ್ಸ್‌ನಲ್ಲಿ ಬೈಕ್ ಮಾರಲು ಹೋದ ವಿದ್ಯಾರ್ಥಿಯೋರ್ವ ಅಲ್ಲಿ ದೊರೆತ ಗ್ರಾಹಕನ ಮಾತಿನ ಮೋಡಿಗೆ ಸಿಲುಕಿ ತನ್ನ ಉಳಿತಾಯ ಖಾತೆಯಲ್ಲಿದ್ದ 12 ಸಾವಿರ ರೂ. ಕಳೆದುಕೊಂಡ ಘಟನೆ ಉಪ್ಪಿನಂಗಡಿಯ ಬಜತ್ತೂರು ಗ್ರಾಮದಲ್ಲಿ ನಡೆದಿದೆ.
ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಈತ, ಬಜತ್ತೂರು ನಿವಾಸಿ. ತನ್ನಲ್ಲಿರುವ ಬೈಕ್‌ನ ಮಾರಾಟ ಮಾಡಲು ಒಎಲ್‌ಒಕ್ಸ್‌ನಲ್ಲಿ ಬೈಕ್‌ನ ವಿವರವನ್ನು ಅಪ್ಲೋಡ್ ಮಾಡಿದ್ದ. ಆ ಬಳಿಕ ಒಂದು ಕರೆ ಬಂದಿದ್ದು, ತನಗೆ ಬೈಕ್ ಬೇಕು. ಹಣವನ್ನು ಹೇಗೆ ಕಳುಹಿಸಲಿ ಎಂದು ಈತನಲ್ಲಿ ವ್ಯಕ್ತಿಯೋರ್ವ ವಿಚಾರಿಸಿದ್ದಾನೆ. ಈ ವೇಳೆ ಫೋನ್ ಪೇ ಮುಖೇನ ಹಣ ಕಳುಹಿಸಿ ಎಂದು ವಿದ್ಯಾರ್ಥಿಯು ತಿಳಿಸಿದ್ದಾನೆ. ಬಳಿಕ ಯುವಕನ ವಾಟ್ಸ್‌ಆ್ಯಪ್‌ಗೆ ಗ್ರಾಹಕ ಕ್ಯೂ ಆರ್ ಕೋಡ್‌ನ ಕಳುಹಿಸಿ ಅದನ್ನು ನಿಮ್ಮ ಫೋನ್ ಪೇಯಿಂದ ಸ್ಕ್ಯಾನ್ ಮಾಡಿದ್ರೆ ನನ್ನ ಖಾತೆಯಿಂದ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ. ನಾಳೆ ಮುಂಜಾನೆ ನಾನು ಬಂದು ಬೈಕ್ ಪಡೆದುಕೊಂಡು ಹೋಗುವೆ ಎಂದು ತಿಳಿಸಿದ್ದಾನೆ.
ಗ್ರಾಹಕ ತನ್ನ ಫೋನ್ ಪೇ ಯ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಬೇಕಾದ ವ್ಯವಸ್ಥೆಯ ಬದಲು ತಾನೇ ಗ್ರಾಹಕನ ಕ್ಯೂ ಆರ್ ಕೋಡ್‌ನ ಸ್ಕ್ಯಾನ್ ಮಾಡಿದ ವಿದ್ಯಾರ್ಥಿಯ ಉಳಿತಾಯ ಖಾತೆಯಿಂದ 12 ಸಾವಿರ ರೂ. ಕಡಿತಗೊಂಡಿದೆ.
ಈ ಕುರಿತು ವಿದ್ಯಾರ್ಥಿಯು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾನೆ.