ಮಂಗಳೂರು: ಡಿ.19ರಂದು ನಡೆದ ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಇಂದು ನಡೆದ ಮ್ಯಾಜಿಸ್ಟ್ರೀಯಲ್ ತನಿಖೆಯಲ್ಲಿ ಒಬ್ಬ ಸಾಕ್ಷಿ ಹೇಳಿಕೆ ನೀಡಿದ್ದಾರೆ ಎಂದು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಿ.ಜಗದೀಶ್ ಹೇಳಿದರು.
ನಗರ ಮಿನಿ ವಿಧಾನಸೌಧದ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಈ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಒಂದಷ್ಟು ವಿಡಿಯೋ ತುಣುಕುಗಳ ಸಿಡಿ ಹಾಗೂ ಪೆನ್ ಡ್ರೈವ್ ವಿಚಾರಣೆಗೆ ಸಂಬಂಧಿಸಿದಂತೆ ತಂದಿದ್ದರು. ಆದರೆ, ಅವರ ಅಫಿಡವಿಟ್ನಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಿಂದ ಸಂಗ್ರಹಿಸಿದ್ದು ಎಂದು ಹೇಳಿದ್ದಾರೆ. ಆದ್ದರಿಂದ ಅದರ ಮೂಲ ಯಾವುದು ಎಂದು ತಿಳಿಯದೇ ವಿಡಿಯೋ ತುಣುಕುಗಳನ್ನು ಸ್ವೀಕರಿಸಿಲ್ಲ ಎಂದು ಮಾಹಿತಿ ನೀಡಿದರು.
ಇಂದಿಗೆ ಸಾರ್ವಜನಿಕರ ವಿಚಾರಣೆ ಮುಗಿದಿದೆ. ಒಟ್ಟು 204 ಮಂದಿ ಸಾರ್ವಜನಿಕರು ವಿಚಾರಣೆಗೆ ಹಾಜರಾಗಿದ್ದಾರೆ. ಮುಂದಕ್ಕೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವಿಚಾರಣೆ ನಡೆಯಲಿದೆ. ಈ ವಿಚಾರಣೆ ಫೆ.25 ರಂದು ನಡೆಯಲಿದ್ದು, ಅಂದು ಸುಮಾರು 12 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಾಕ್ಷಿ ಹೇಳಲು ಅವಕಾಶ ನೀಡಲಾಗಿದೆ. ಅಲ್ಲದೇ, ಅವರಿಗೆ ದಾಖಲೆಗಳನ್ನು ಹಾಜರುಪಡಿಸಲು ನೋಡಲ್ ಅಧಿಕಾರಿಗಳ ಮೂಲಕ ನೋಟಿಸ್ ನೀಡಲಾಗಿದೆ ಎಂದರು.
ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರುಗಳು ಮುಖ್ಯ ಸಾಕ್ಷಿಗಳಾಗಿರೋದರಿಂದ ವಿಚಾರಣೆ ಕುರಿತಂತೆ ಪ್ರತ್ಯೇಕ ದಿನಾಂಕ ನಿಗದಿ ಪಡಿಸಲಾಗುವುದು. 176 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಲಿಸ್ಟ್ ನೀಡಲಾಗಿದೆ. ಇದರಲ್ಲಿ ಮೊದಲಿಗೆ ಪೊಲೀಸ್ ಆಯುಕ್ತರ ಹೆಸರಿದೆ. ಉಪ ಪೊಲೀಸ್ ಆಯುಕ್ತರ (ಅಪರಾಧ ಮತ್ತು ಕಾನೂನು) ಹೆಸರು ಎರಡನೆಯದಾಗಿ ನಮೂದಾಗಿದೆ. ಅದರಲ್ಲಿ ಸೀರಿಯಲ್ ನಂಬರ್ 3ರಿಂದ 14 ರವರೆಗೆ ಪೊಲೀಸರೇ ಇದ್ದು, ಅವರ ವಿಚಾರಣೆ ಫೆ.25ರಂದು ನಡೆಯಲಿದೆ ತಿಳಿಸಿದರು.