ಮಂಗಳೂರು(ದಕ್ಷಿಣ ಕನ್ನಡ): ಲಾಕ್ಡೌನ್ ಅವಧಿಯಲ್ಲಿ ತಮ್ಮ ಸ್ವಂತ ರಾಜ್ಯಗಳಿಗೆ ತೆರಳಲು ಬಯಸಿದ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಇದುವರೆಗೆ ಜಿಲ್ಲೆಯಿಂದ 16 ರೈಲುಗಳ ಮೂಲಕ 21,888 ಮಂದಿ ತಮ್ಮ ತವರು ರಾಜ್ಯಕ್ಕೆ ತೆರಳಿದ್ದಾರೆ.
ಬಿಹಾರಕ್ಕೆ 5 ರೈಲುಗಳು, ಜಾರ್ಖಂಡ್ಗೆ 5, ರಾಜಸ್ಥಾನಕ್ಕೆ 1 ಹಾಗೂ ಉತ್ತರ ಪ್ರದೇಶಕ್ಕೆ 5 ರೈಲುಗಳು ಜಿಲ್ಲೆಯಿಂದ ತೆರಳಿವೆ. ಪ್ರತೀ ರೈಲಿನಲ್ಲಿ 1,400ರಷ್ಟು ಪ್ರಯಾಣಿಕರು ಸಂಚರಿಸಿದ್ದಾರೆ. ಮಂಗಳೂರು ಜಂಕ್ಷನ್ ಹಾಗೂ ಪುತ್ತೂರು ರೈಲ್ವೆ ನಿಲ್ದಾಣಗಳಿಂದ ರೈಲು ಹೊರಟಿದ್ದು, ಪ್ರಯಾಣಿಕರಿಂದ ಇಲಾಖೆ ನಿಗದಿಪಡಿಸಿದ ದರವನ್ನ ಪಡೆಯಲಾಗಿದೆ. ಮೇ 9ರಿಂದ ರೈಲು ಸಂಚಾರ ಆರಂಭವಾಗಿದ್ದು, ವಲಸೆ ಕಾರ್ಮಿಕರನ್ನ ನಿಗದಿತ ಸ್ಥಳಗಳಿಂದ ರೈಲು ನಿಲ್ದಾಣಕ್ಕೆ ಕರೆದುಕೊಂಡು ಬರಲು ಜಿಲ್ಲಾಡಳಿತದ ವತಿಯಿಂದ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪ್ರತೀ ಬಸ್ಗೆ ಓರ್ವ ಜಿಲ್ಲಾ ಮಟ್ಟದ ಅಧಿಕಾರಿಯನ್ನ ನೋಡಲ್ ಅಧಿಕಾರಿಯಾಗಿ ಆಗಿ ನೇಮಿಸಿ, ಕಂದಾಯ ಇಲಾಖೆಯ ಓರ್ವ ಸಿಬ್ಬಂದಿ ಹಾಗೂ ಇಬ್ಬರು ಪೊಲೀಸರನ್ನ ಸಹಾಯಕರನ್ನಾಗಿ ನಿಯೋಜಿಸಲಾಗಿತ್ತು. ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಸುರತ್ಕಲ್, ಬೈಕಂಪಾಡಿ, ಪಣಂಬೂರು, ಜೋಕಟ್ಟೆ, ಪಂಜಿಮೊಗರು, ಉಳ್ಳಾಲ, ಕಂಕನಾಡಿ, ಬಂದರ್ ಮತ್ತಿತರ ಸ್ಥಳಗಳಿಗೆ ತೆರಳಿ ಬಸ್ನಲ್ಲಿ ಕರೆದುಕೊಂಡು ಬಂದು ನೇರವಾಗಿ ರೈಲು ನಿಲ್ದಾಣಕ್ಕೆ ಬರಲು ವ್ಯವಸ್ಥೆ ಮಾಡಲಾಗಿತ್ತು.
ಬಸ್ ಹತ್ತುವ ಮೊದಲೇ ಪ್ರಯಾಣಿಕರ ವಿಳಾಸ, ತಲುಪುವ ಸ್ಥಳ, ಆಧಾರ್ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರಗಳನ್ನ ಪಡೆದು ಆಯಾ ಅಧಿಕಾರಿಗಳ ಚಾರ್ಟ್‍ನಲ್ಲಿ ನಮೂದಿಸುತ್ತಾರೆ. ಬಳಿಕ ಆ ಚಾರ್ಟ್ಅನ್ನ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ ನಂತರ ಅದನ್ನ ಕ್ರೋಢೀಕರಿಸಿ ಆಯಾ ರೈಲಿನಲ್ಲಿ ಹೋಗುವ ಪ್ರಯಾಣಿಕರ ಸಂಪೂರ್ಣ ವಿವರಗಳನ್ನ ಸಂಬಂಧಪಟ್ಟ ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಕಳುಹಿಸಬೇಕಾಗುತ್ತದೆ. ಈ ಚಾರ್ಟ್ ಬಂದ ನಂತರವೇ ಅಲ್ಲಿನ ರಾಜ್ಯ ಸರ್ಕಾರಗಳು ಇಲ್ಲಿಂದ ಹೋದ ಪ್ರಯಾಣಿಕರನ್ನ ಸ್ವೀಕರಿಸಲು ವ್ಯವಸ್ಥೆ ಮಾಡುತ್ತವೆ.
ಸದ್ಯ, ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳ ಹಾಗೂ ಒರಿಸ್ಸಾ ರಾಜ್ಯಗಳ ವಲಸೆ ಕಾರ್ಮಿಕರು ಮಾತ್ರ ತೆರಳಲು ಬಾಕಿಯಿದ್ದು, ಶೀಘ್ರದಲ್ಲಿಯೇ ಅವರಿಗೂ ರೈಲಿನ ವ್ಯವಸ್ಥೆಯಾಗಲಿದೆ.