ಪುತ್ತೂರು: ನರಿಮೊಗರು ಶಾಲಾ ಬಳಿ ನಿನ್ನೆ ರಾತ್ರಿ ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸಾವಿಗೀಡಾದ ಘಟನೆ ನಡೆದಿದೆ.
ಕುರಿಯ ಗ್ರಾಮದ ಇಡಬೆಟ್ಟು ಸಮೀಪದ ಕಟ್ಟದಬೈಲು ನಿವಾಸಿ ಐತ್ತಪ್ಪ ಎಂಬುವರ ಮಗ ಮಿಥುನ್(18) ಹಾಗೂ ಐತ್ತಪ್ಪ ಸಹೋದರ, ಮೆಸ್ಕಾಂ ಪವರ್ಮ್ಯಾನ್ ಉಮೇಶ್ ಎಂಬುವರ ಮಗ ಭವಿತ್ (19) ಮೃತಪಟ್ಟವರು.
ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಸವಾರರಿಬ್ಬರೂ ಸಾವಿಗೀಡಾಗಿದ್ದಾರೆ. ವೀರಮಂಗಲ ಸಮೀಪ ನಡೆದ ಮದುವೆ ಮೆಹಂದಿ ಕಾರ್ಯಕ್ರಮವೊಂದಕ್ಕೆ ಮಿಥುನ್, ಭವಿತ್ ಸಹೋದರರು ಬೈಕ್ನಲ್ಲಿ ಹೋಗಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಅಪಘಾತಕ್ಕೀಡಾಗಿ ರಸ್ತೆ ಮಧ್ಯೆ ಬಿದ್ದಿದ್ದ ಸವಾರರಿಬ್ಬರನ್ನು ಅದೇ ರಸ್ತೆಯಾಗಿ ಹೋಗುತ್ತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ತಮ್ಮ ಕಾರಿನಲ್ಲಿ ಕರೆ ತಂದು ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಲೆಗೆ ಗಂಭೀರ ಗಾಯಗೊಂಡಿದ್ದ ಸವಾರರಿಬ್ಬರೂ ಸಾವಿಗೀಡಾಗಿದ್ದಾರೆ. ಮೃತದೇಹಗಳನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.