ಕಡಬ/ದಕ್ಷಿಣ ಕನ್ನಡ: ನಗರದಲ್ಲಿ ಕಳೆದೆರಡು ದಿನಗಳಿಂದ ವಿವಿಧ ಅಂಗಡಿಗಳಲ್ಲಿ ಮನಬಂದಂತೆ ದರವಸೂಲಿ ಮಾಡುವುದು ಸೇರಿದಂತೆ ಕದ್ದುಮುಚ್ಚಿ ಹಾರ್ಡ್‌ವೇರ್ ಹಾಗೂ ಇತರ ಸಾಮಗ್ರಿಗಳನ್ನು ಮಾರಾಟ ಮಾಡುವುದು ಕಂಡು ಬಂದಿದೆ.
ಈ ಹಿನ್ನೆಲೆ ಕಡಬ ಕೋವಿಡ್ ಕಾರ್ಯಪಡೆ ಏ. 22ರಂದು ಮುಂಜಾನೆಯಿಂದಲೇ ತುರ್ತು ಕಾರ್ಯಾಚರಣೆಗೆ ಇಳಿದು ನಿಯಮ ಉಲ್ಲಂಘನೆ ಮಾಡಿ ವ್ಯಾಪಾರ ಮಾಡುತ್ತಿರುವ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದೆ. ಅಲ್ಲದೇ ನಿಗದಿತ ದರದಲ್ಲೇ ವಸ್ತುಗಳನ್ನು ಮಾರಾಟ ಮಾಡುವಂತೆ ತಿಳಿಸಿ, ಕಾನೂನು ಮೀರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಕಡಬ ಪೇಟೆಯಲ್ಲಿ ಅಧಿಕಾರಿಗಳು ಎಲ್ಲ ಅಂಗಡಿಗಳಿಗೆ ತೆರಳಿ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದಾರೆ. ಸಾಮಗ್ರಿಗಳಿಗೆ ನಿಗದಿತ ದರ ಮತ್ತು ಮಿತದರದಲ್ಲಿ ಮಾರಾಟ ಮಾಡಬೇಕು, ಅಲ್ಲದೇ ಅಂಗಡಿಗಳ ಎದುರು ಎಲ್ಲ ಸಾಮಗ್ರಿಗಳ ದರಪಟ್ಟಿಯನ್ನು ಕೂಡಲೇ ಅಳವಡಿಸಬೇಕು, ಸರ್ಕಾರದ ಆದೇಶ ಬರುವವರೆಗೂ ಹಾರ್ಡ್‌ವೇರ್ ಸಾಮಗ್ರಿಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ, ಯಾವುದೇ ವ್ಯಾಪಾರ ಮಾಡಬೇಕಾದರೂ ಪಂಚಾಯತ್‌ನಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು ಮತ್ತು ಅಂಗಡಿ ಲೈಸನ್ಸ್ ಹೊಂದಿರಬೇಕು. ಅಲ್ಲದೇ ಅವಧಿ ಮೀರಿದ ಸಾಮಗ್ರಿಗಳನ್ನು ಮಾರಾಟ ಮಾಡಬಾರದು ಎಂಬಿತ್ಯಾದಿ ವಿಷಯಗಳ ಬಗ್ಗೆ ಕಾರ್ಯಪಡೆ ಸಿಬ್ಬಂದಿ ಖಡಕ್ ಸೂಚನೆ ನೀಡಿದ್ದಾರೆ.
ಕಡಬದಲ್ಲಿ ಎಪಿಎಂಸಿಯ ನಿಯಮ ಮೀರಿ ಗೇರು ಬೀಜ ಖರೀದಿಯ ನೆಪದಲ್ಲಿ ಅಡಿಕೆಯನ್ನು ಖರೀದಿಸಿ ಸಂಗ್ರಹ ಮಾಡಿ ಅದನ್ನು ಕೇರಳ, ತಮಿಳುನಾಡಿಗೆ ಸಾಗಣೆ ಮಾಡಲು ಯತ್ನಿಸಿದ ಎರಡು ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಡಬ ಬಸ್ ನಿಲ್ದಾಣದ ಬಳಿ ಅಡಿಕೆ ವ್ಯಾಪಾರ ಮಾಡುತ್ತಿದ್ದ ವರ್ತಕರೋರ್ವರಿಂದ ಅಡಿಕೆ ಮತ್ತು ಗೇರು ಬೀಜ ಲೋಡ್ ಮಾಡಿರುವ ವಾಹನಗಳನ್ನು ಕಡಬ ಕಂದಾಯ ನಿರೀಕ್ಷಕ ಹಾಗೂ ನಿಗ್ರಹದಳದ ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶ ಪಡಿಸಿಕೊಂಡಿದ್ದಾರೆ.
ಅಂಗಡಿಯಲ್ಲಿ ಗೇರು ಬೀಜ ಅಕ್ರಮ ದಾಸ್ತಾನು ಮತ್ತು ಲಾರಿಯಲ್ಲಿ ದಾಖಲೆ ಪತ್ರಗಳು ಇಲ್ಲದೇ ಗೇರು ಬೀಜ ಸಾಗಣೆ ಪತ್ತೆಯಾಗಿದೆ. ಒಟ್ಟು 37,200 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಅಡಿಕೆ ಗೇರು ಬೀಜ ಸೇರಿದಂತೆ ಕೃಷಿಯುತ್ಪನ್ನಗಳಿಗೆ ಕೇರಳ ರಾಜ್ಯದ ಗಡಿ ಭಾಗದಲ್ಲಿನ ವ್ಯಾಪಾರಸ್ಥರು ಕೇರಳದ ಬಿಲ್ ಮಾಡಿ ಅದನ್ನು ರಾಜ್ಯದಲ್ಲೇ ಮಾರಾಟ ಮಾಡುವ ಮೂಲಕ ರಾಜ್ಯ ಸರಕಾರಕ್ಕೆ ಹಾಗೂ ಎಪಿಎಂಸಿಗೆ ತೆರಿಗೆ ವಂಚನೆ ಮಾಡುತ್ತಿರುವ ಬೃಹತ್ ಜಾಲವೊಂದರ ಬಗ್ಗೆ ವರದಿಯಾಗಿದೆ.
ಕಡಬದಲ್ಲಿನ ಜನಸಂದಣಿ ಮತ್ತು ಅಕ್ರಮ ವ್ಯಾಪಾರದ ಬಗ್ಗೆ ನಿನ್ನೆ ಈಟಿವಿ ಭಾರತ ಸೇರಿದಂತೆ ಮಾಧ್ಯಮ ವರದಿಗಳು ಪ್ರಸಾರವಾದ ನಂತರ ಅಧಿಕಾರಿಗಳು ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರು. ಇದರಿಂದಾಗಿ ಹಲವು ಅವ್ಯವಹಾರಗಳು ಬೆಳಕಿಗೆ ಬಂದಿವೆ. ಕಡಬ ಕಂದಾಯ ನಿರೀಕ್ಷಕ ಅವೀನ್ ರಂಗತ್‌ಮಲೆ, ಪುತ್ತೂರು ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ, ಕೋವಿಡ್ ನಿಯಂತ್ರಣಾಧಿಕಾರಿ ಮಸ್ತಾನ್, ಕಡಬ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ, ಗ್ರಾಮಕರಣಿಕ ಹರೀಶ್ ಕುಮಾರ್, ಸಿಬ್ಬಂದಿಗಳಾದ ಪದ್ಮಯ್ಯ, ಹರೀಶ್ ಬೆದ್ರಾಜೆಯವರನ್ನು ಒಳಗೊಂಡ ತಂಡದಿಂದ ಈ ಕಾರ್ಯಾಚರಣೆ ನಡೆದಿದೆ.