ಮಂಗಳೂರು: ಕೆಲ ದಿನಗಳಿಂದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣ ಇದೆ. ಈ ಮಧ್ಯೆ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬರ ಕೊಲೆ ಪ್ರಕರಣ ಜನರ ಮತ್ತು ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ. ಸುರತ್ಕಲ್ನ ಕಾಟಿಪಳ್ಳ ನಿವಾಸಿ ಜಲೀಲ್ ಹತ್ಯೆಗೀಡಾದವರು. ಈ ಪ್ರಕರಣದ ಆರೋಪಿಗಳ ಪತ್ತೆಗೆ 8 ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮಾಹಿತಿ ನೀಡಿದ್ದಾರೆ.
ಶೀಘ್ರದಲ್ಲೇ ಆರೋಪಿಗಳ ಬಂಧನ: ಮಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ಜಲೀಲ್ ಹತ್ಯೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಹತ್ಯೆ ಮಾಡಿರುವ ನೈಜ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಗಡುವು: ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದು. ಜಲೀಲ್ ಹತ್ಯೆ ಆರೋಪಿಗಳ ಶೀಘ್ರ ಬಂಧನಕ್ಕೆ ಆಕ್ರೋಶಿತ ಗುಂಪು ಜಲೀಲ್ ಮನೆ ಬಳಿ ಮೃತದೇಹವನ್ನು ಇಟ್ಟು ಕೊಂಚ ಕಾಲ ಪ್ರತಿಭಟನೆ ನಡೆಸಿದೆ. ಅವರು ಆರೋಪಿಗಳ ಬಂಧನಕ್ಕೆ 24 ಗಂಟೆಯೊಳಗೆ ಬಂಧಿಸುವ ಗಡುವು ನೀಡಿದ್ದಾರೆ. ಸಾರ್ವಜನಿಕರ ಮನವೊಲಿಸಿ ಜಲೀಲ್ ಮೃತದೇಹವನ್ನು ದಫನಕ್ಕಾಗಿ ಮಸೀದಿಗೆ ಕಳುಹಿಸಲಾಗಿದೆ ಎಂದರು.
ಮದ್ಯ ಮರಾಟ ನಿಷೇಧ: ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 4 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಕ್ರಿಸ್ ಮಸ್ ಇರುವುದರಿಂದ ಪೂರ್ವನಿಯೋಜಿತ ಕಾರ್ಯಕ್ರಮಗಳಿಗೆ ವಿನಾಯತಿ ನೀಡಲಾಗಿದೆ. ಆದರೆ 2 ದಿನಗಳ ಕಾಲ ಸುರತ್ಕಲ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಎನ್. ಶಶಿಕುಮಾರ್ ವಿರವರಿಸಿದ್ದಾರೆ.
ಓದಿ.. ಸುರತ್ಕಲ್ ಹತ್ಯೆ ಪ್ರಕರಣ: ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ನಿಷೇಧಾಜ್ಞೆ ಜಾರಿ: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಾದ ಸುರತ್ಕಲ್, ಬಜಪೆ, ಕಾವೂರು ಹಾಗೂ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುವುದರಿಂದ ಡಿ. 25 ಬೆಳಗ್ಗೆ 6 ರಿಂದ 27 ರ ಬೆಳಗ್ಗೆ 6 ರವರೆಗೆ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಓದಿ.. ಸುರತ್ಕಲ್ನಲ್ಲಿ ಚೂರಿ ಇರಿತಕ್ಕೊಳಗಾದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು
ಜಲೀಲ್ ಮೃತದೇಹ ಇರಿಸಿ ಪ್ರತಿಭಟನೆ: ಚೂರಿ ಇರಿತಕ್ಕೆ ಒಳಗಾಗಿ ಕೊಲೆಯಾದ ಜಲೀಲ್ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಸ್ಥಳೀಯ ನಿವಾಸಿಗಳು ಜಲೀಲ್ ಮೃತದೇಹ ಇರಿಸಿ ಪ್ರತಿಭಟನೆ ನಡೆಸಿ ಪರಿಹಾರಕ್ಕಾಗಿ ಆಗ್ರಹಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವಂತೆ ಆಗ್ರಹಿಸಲಾಯಿತು. ಸ್ಥಳಕ್ಕೆ ಬಂದ ಮಂಗಳೂರು ಕಮಿಷನರ್ ಶಶಿಕುಮಾರ್ಗೆ ಸ್ಥಳೀಯರು ಮುತ್ತಿಗೆ ಹಾಕಿದರು. ಕೊನೆ ಸ್ಥಳೀಯರನ್ನು ಕಮಿಷನರ್ ಶಶಿಕುಮಾರ್ ಮನವೊಲಿಸಿದರು.
ಘಟನೆ ಹಿನ್ನೆಲೆ: ಶನಿವಾರ ರಾತ್ರಿ ಸುರತ್ಕಲ್ನಲ್ಲಿ ದುಷ್ಕರ್ಮಿಗಳಿಬ್ಬರು ಕೃಷ್ಣಾಪುರ ನಿವಾಸಿ ಜಲೀಲ್ ಎಂಬುವವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ನೈತಂಗಡಿಯಲ್ಲಿ ಜಲೀಲ್ ದಿನಸಿ ಅಂಗಡಿ ಹೊಂದಿದ್ದಾರೆ. ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಆರೋಪಿಗಳು ಎದೆಯ ಭಾಗಕ್ಕೆ ಚೂರಿಯಿಂದ ಬಲವಾಗಿ ಇರಿದು ಪರಾರಿಯಾಗಿದ್ದರು.
ಇದನ್ನೂ ಓದಿ: ಸುರತ್ಕಲ್ ಹತ್ಯೆ ಪ್ರಕರಣ: ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಜಲೀಲ್ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪೋಸ್ಟ್ ಮಾರ್ಟಂ ವ್ಯವಸ್ಥೆಗಾಗಿ ಅವರ ಮೃತದೇಹವನ್ನು ಎ.ಜೆ.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಹತ್ಯೆ ಪ್ರಕರಣದಿಂದಾಗಿ ಸುರತ್ಕಲ್ನ ಸುತ್ತಮುತ್ತ ಉದ್ವಿಗ್ನ ವಾತಾವರಣ ಉಂಟಾಗಿತ್ತು.