ಕಡಬ: ಮಧ್ಯರಾತ್ರಿ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ತಿರುಗಾಡುವುದನ್ನು ಗಮನಿಸಿದ ಗಸ್ತಿನಲ್ಲಿದ್ದ ಕಡಬ ಪೊಲೀಸರು ಆತನನ್ನು ಅಟ್ಟಾಡಿಸಿದ ಘಟನೆ ಪೆರಾಬೆ ಗ್ರಾಮದ ಕುಂತೂರಿನಲ್ಲಿ ನಡೆದಿದೆ.
ಕಡಬ ಎಸ್ಐ ರುಕ್ಮನಾಯ್ಕ್ ಮತ್ತು ಸಿಬ್ಬಂದಿ ಕಡಬ-ಆಲಂಕಾರು ರಾಜ್ಯ ರಸ್ತೆಯಲ್ಲಿ ಕರ್ತವ್ಯದ ನಿಮಿತ್ತ ತೆರಳುತ್ತಿದ್ದ ವೇಳೆ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ವ್ಯಕ್ತಿಯೊಬ್ಬ ಮಾರ್ಗದ ಸಮೀಪ ಕಾಣಸಿಕ್ಕಿದ್ದಾನೆ. ಪೊಲೀಸ್ ವಾಹನ ಕಂಡೊಡನೆ ಆತ ವೇಗವಾಗಿ ಓಡಲು ಆರಂಭಿಸಿದಾಗ ಅನುಮಾನಗೊಂಡ ಪೊಲೀಸರು ವಾಹನ ನಿಲ್ಲಿಸಿ ಆತನನ್ನು ಬೆನ್ನಟ್ಟಿದ್ದು, ಈತ ಪಕ್ಕದ ರಸ್ತೆಯತ್ತ ಓಡಿ ಕತ್ತಲೆಯಲ್ಲಿ ಮರೆಯಾಗಿದ್ದಾನೆ.
ಪೊಲೀಸರು ಬೆನ್ನಟ್ಟಿ ಅಟ್ಟಾಡಿಸಿರುವ ದೃಶ್ಯ ಸ್ಥಳೀಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ವಾಹನ ನಿಲ್ಲಿಸಿ ಟಾರ್ಚ್ ಬಳಸಿ ಆತನನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಅಂಗಡಿ, ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿರುವುದು ಹೆಚ್ಚಾಗುತಿದ್ದು, ಕಡಬ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಟ್ಟಿರುವುದಕ್ಕೆ ಇದೊಂದು ಉತ್ತಮ ಉದಾಹರಣೆ.