ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 19 ರಂದು 26 ಆಗಮನ ಮತ್ತು 25 ನಿರ್ಗಮನ ವಿಮಾನಗಳಲ್ಲಿ 7399 ಪ್ರಯಾಣಿಕರು ಪ್ರಯಾಣಿಸಿರುವುದು ಹೊಸ ದಾಖಲೆ ಆಗಿದೆ. ಆಗಮನ ಮತ್ತು ನಿರ್ಗಮನ ವಿಮಾನದಲ್ಲಿ ಕ್ರಮವಾಗಿ 3527 ಆಗಮಿಸುವ ಮತ್ತು 3872 ನಿರ್ಗಮಿಸುವ ಪ್ರಯಾಣಿಕರು ಸೇರಿದ್ದಾರೆ.
ಇದು ಅಕ್ಟೋಬರ್ 31, 2020ರ ವಾಣಿಜ್ಯ ಕಾರ್ಯಾಚರಣೆ ದಿನಾಂಕದಿಂದ (ಸಿಒಡಿ) ವಿಮಾನ ನಿಲ್ದಾಣವು ನಿರ್ವಹಿಸಿದ ಅತಿ ಹೆಚ್ಚು ದೈನಂದಿನ ಪ್ರಯಾಣಿಕರಾಗಿದ್ದಾರೆ. ನವೆಂಬರ್ 2021ರ ನಂತರ ವಿಮಾನ ನಿಲ್ದಾಣವು 7000 ಪ್ರಯಾಣಿಕರ ದೈನಂದಿನ ನಿರ್ವಹಣೆಯ ಗಡಿಯನ್ನು ದಾಟಿರುವುದು ಇದೇ ಮೊದಲು ಆಗಿದೆ.
ವಿಮಾನಯಾನ ಸಂಸ್ಥೆ - ಇಂಡಿಗೊ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳಲ್ಲಿ ನವೆಂಬರ್ 19 ರಂದು ಈ ದಾಖಲೆ ಆಗಿದೆ. ಮಂಗಳೂರು- ಪುಣೆ ವಲಯದಲ್ಲಿ ವಿಮಾನ ಪುನಾರಂಭ ಮತ್ತು ನೆರೆಯ ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವು ದಿನದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
2021ರ ನವೆಂಬರ್ 27ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 7084 ಪ್ರಯಾಣಿಕರು ಪ್ರಯಾಣಿಸಿದ್ದರು. ಈ ಹಿಂದೆ ನವೆಂಬರ್ 6, 2021 ಮತ್ತು ನವೆಂಬರ್ 20, 2021 ರಂದು ಕ್ರಮವಾಗಿ 7168 ಪ್ರಯಾಣಿಕರು ಮತ್ತು 7304 ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿದ್ದಾರೆ. 2022-23ರ ಹಣಕಾಸು ವರ್ಷದಲ್ಲಿ ಈ ವಿಮಾನ ನಿಲ್ದಾಣವು ದಿನಕ್ಕೆ ಸರಾಸರಿ 5200 ಪ್ರಯಾಣಿಕರನ್ನು ನಿರ್ವಹಿಸಿದೆ.
ಚಳಿಗಾಲದ ವೇಳಾಪಟ್ಟಿ ಜಾರಿಗೆ ಬಂದ ಅಕ್ಟೋಬರ್ 29 ರಿಂದ ವಿಮಾನ ಸಂಚಾರ ಚಲನೆಯಲ್ಲಿನ ಹೆಚ್ಚಳವಾಗಿದೆ. ಭಾರತದಾದ್ಯಂತ ಹಬ್ಬದ ಋತುವಿನಲ್ಲಿ ಪ್ರಯಾಣವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಮೇಣ ಹೆಚ್ಚುತ್ತಿರುವ ಜನಸಂದಣಿಗೆ ಕಾರಣವಾಗಿದೆ.
ದೇಶಿಯ ಪ್ರಯಾಣ ದುಬಾರಿ : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶಿಯ ಪ್ರಯಾಣವು ದುಬಾರಿಯಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (AERAI)ವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮನವಿ ಅನುಮತಿಸಿದ ನಂತರ, ಈ ವಿಮಾನ ನಿಲ್ದಾಣದಲ್ಲಿ (MIA) ಬಳಕೆದಾರರ ಅಭಿವೃದ್ಧಿ ಶುಲ್ಕ(UDF)ವು ಫೆಬ್ರವರಿ 1 ರಿಂದ ಮಾರ್ಚ್ 31ರ ವರೆಗೆ ರೂ. 150 ರಿಂದ ರೂ. 350ಕ್ಕೆ ಏರಿಕೆ ಮಾಡಿತ್ತು.
ಎಇಆರ್‌ಎಐನಿಂದ ಮಾರ್ಚ್ 31, 2023ರ ವರೆಗಿನ ಅವಧಿಗೆ ಅಂತಾರಾಷ್ಟ್ರೀಯ ಪ್ರಯಾಣಿಕರ UDF ಅನ್ನು ಪ್ರಸ್ತುತ ರೂ. 850 ರಿಂದ ರೂ. 770 ಕ್ಕೆ ಇಳಿಸಲಾಗಿತ್ತು. ಈ ಅವಧಿಯಲ್ಲಿ ಇಳಿಯುವ ದೇಶಿಯ ಪ್ರಯಾಣಿಕರು 150 ರೂ. ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ರೂ. 330 ಯುಡಿಎಫ್ ಪಾವತಿಸಬೇಕು ಎಂದು ತಿಳಿಸಿತ್ತು.
ಇದನ್ನೂ ಓದಿ: ಮಂಗಳೂರಿನಿಂದ ದೆಹಲಿಗೆ ಇಂದಿನಿಂದ ಇಂಡಿಗೋ ವಿಮಾನ ಯಾನ ಸೇವೆ ಆರಂಭ