ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಪಿಯುಸಿ ವಿದ್ಯಾರ್ಥಿಗೆ ಇನ್ನೊಂದು ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ನಗರದ ನಂತೂರು ಪದುವಾ ಕಾಲೇಜು ಬಳಿ ನಡೆದಿದೆ.
ನಂತೂರು ಪದುವಾ ಬಳಿಯ ನಿಟ್ಟೆ ಪಿಯು ಕಾಲೇಜಿನ ಪ್ರಥಮ ಪಿಯುನಲ್ಲಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ವಿದ್ಯಾರ್ಥಿಗೆ ಪದುವಾ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಬ್ಬರು ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ.
ಪದುವಾ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು ಅದೇ ಕಾಲೇಜಿನ ವಿದ್ಯಾರ್ಥಿಗೆ ಬೆದರಿಕೆ ಹಾಕಿತ್ತು. ಈ ವಿಚಾರವಾಗಿ ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿ ತನ್ನ ಗೆಳೆಯರೊಂದಿಗೆ ಸಮಾಧಾನ ಮಾಡಲು ಅಲ್ಲಿಗೆ ಹೋಗಿದ್ದ. ಕೋಪಗೊಂಡ ಆರೋಪಿ ವಿದ್ಯಾರ್ಥಿಗಳು ಆತನನ್ನು ನಂತೂರು ಜಂಕ್ಷನ್ ಬಳಿಯಿರುವ ಬಬ್ಬುಸ್ವಾಮಿ ದೇವಸ್ಥಾನದ ಹಿಂಬದಿಗೆ ಕರೆದೊಯ್ದು ಚೂರಿಯಿಂದ ಇರಿದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ಮಾಡಿರುವ ಪಿಯುಸಿ ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಠಾಣೆಗೆ ಕರೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಕದ್ರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಸಂಘರ್ಷಕ್ಕೊಳಾಗದ ಬಾಲಕರ ವಿರುದ್ಧ ಬಾಲ ನ್ಯಾಯ ಮಂಡಳಿಗೆ ಸೂಕ್ತ ವರದಿಯನ್ನು ಸಲ್ಲಿಸಿದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಸ್ಸೋಂನ ಐಐಟಿಯಲ್ಲಿ ಕೇರಳ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು.. ಕಾರಣ ನಿಗೂಢ