ಮಂಗಳೂರು: ದಕ್ಷಿಣ ಭಾರತದ ಸಿನಿಮಾಗಳ ಹುಚ್ಚಿನಿಂದ ಮಾನಸಿಕ ಅಸ್ವಸ್ಥತೆ ಹೆಚ್ಚಿಸಿಕೊಂಡ ಯುವಕನೊಬ್ಬ ಮನೆ ಬಿಟ್ಟು ಪರಾರಿಯಾಗಿ ಮಂಗಳೂರಿಗೆ ತಲುಪಿ ಇದೀಗ ಗುಣಮುಖನಾಗಿ ಮತ್ತೆ ಮನೆ ಸೇರಿದ್ದಾನೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ದಸ್ಕೇಡ್ನ ಮುಸಲೆ ಭಗ್ವಾನ್ ಎಂಬವರ ಪುತ್ರ ತುಕಾರಾಂ ಮೂರು ತಿಂಗಳ ಹಿಂದೆ ಮಂಗಳೂರಿನ ಕದ್ರಿಯಲ್ಲಿ ಮಾನಸಿಕ ಅಸ್ವಸ್ಥನಾಗಿ ತಿರುಗಾಡುತ್ತಿದ್ದ.
ಈತನನ್ನು ಮಂಗಳೂರಿನ ವೈಟ್ ಡೌಸ್ ಸಂಸ್ಥೆಯ ಕೋರಿನಾ ರಸ್ಕಿನ್ ಅವರು ರಕ್ಷಿಸಿ ತಮ್ಮ ಸಂಸ್ಥೆಗೆ ಕರೆದೊಯ್ದು ಉಪಚರಿಸಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಬಳಿಕ ಈತ ತನ್ನ ಊರಿನ ಹೆಸರನ್ನು ಹೇಳಿ ತನ್ನ ಗುರುತು ಹೇಳಿದ್ದ. ಅದರಂತೆ ಈತನ ಮನೆಯವರನ್ನು ಪತ್ತೆ ಹಚ್ಚಿ ವಿಷಯ ತಿಳಿಸಲಾಯಿತು. ಆತನ ಸಹೋದರ ಸಕಾರಾಂ ವೈಟ್ ಡೌಸ್ ಸಂಸ್ಥೆಗೆ ಬಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ.
ವೈಟ್ ಡೌಸ್ ಸಂಸ್ಥೆಗೆ ತನ್ನ ಸಹೋದರ ಸಕಾರಾಂ ಬಂದಾಗ ತುಕಾರಾಂ ಸಂತಸಗೊಂಡು, ಅಣ್ಣನೊಂದಿಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಜೊತೆಗೆ ತನಗಿರುವ ಸಿನಿಮಾದ ಹುಚ್ಚನ್ನೂ ತೋರಿಸಿದ್ದಾನೆ. ತುಕಾರಾಂ ಸಂಪೂರ್ಣ ಗುಣಮುಖ ಆಗಿಲ್ಲದಿದ್ದರೂ ಆತನ ಮನೆಯವರು ಬಂದು ಕರೆದುಕೊಂಡು ಹೋದ ಕಾರಣ ಆತನಿಗೆ ನೀಡುವ ಔಷಧ ಚೀಟಿಯನ್ನು ಕೊಟ್ಟು ಕಳುಹಿಸಲಾಯಿತು. ಇದು ಮಾನಸಿಕ ಅಸ್ವಸ್ಥರನ್ನು ವೈಟ್ ಡೌಸ್ ಸಂಸ್ಥೆಯು ಚಿಕಿತ್ಸೆ ನೀಡಿ ಮನೆಯವರಿಗೆ ಒಪ್ಪಿಸಿದ 420ನೇ ಪ್ರಕರಣವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಕಾರಾಂ, "ತುಕಾರಾಂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಹಿಂದೆಯೂ ನಾಲ್ಕು ಬಾರಿ ಮನೆ ಬಿಟ್ಟು ಹೋಗಿದ್ದ. ಆ ಬಳಿಕ ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದೆವು. ಕೊನೆಗೆ ಮಂತ್ರವಾದಿ ಮೂಲಕ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಿದ್ದೆವು. ಅಲ್ಲಿಂದ ಅವನು ತಪ್ಪಿಸಿಕೊಂಡಿದ್ದ. ಆತನಿಗೆ ದಕ್ಷಿಣ ಭಾರತದ ಸಿನಿಮಾಗಳನ್ನು ನೋಡುವ ಹುಚ್ಚಿತ್ತು. ಆ ಸಿನಿಮಾಗಳ ನಾಯಕರಂತೆ ತಾನು ಆಗಬೇಕೆಂದು ಆತ ವರ್ತನೆ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ವೈಟ್ ಡೌಸ್ ಸಂಸ್ಥೆಯ ಕೊರೀನಾ ರಸ್ಕಿನ್ ಮಾತನಾಡಿ "ಆಗಸ್ಟ್ 7ರಂದು ಈತ ಮಾನಸಿಕ ಅಸ್ವಸ್ಥನಾಗಿ ನಮಗೆ ನಗರದ ಕದ್ರಿಯಲ್ಲಿ ಸಿಕ್ಕಿದ್ದ. ಆತನನ್ನು ನಮ್ಮ ಸಂಸ್ಥೆಗೆ ಕರೆದುಕೊಂಡು ಬಂದಿದ್ದೆವು. ಆತನನ್ನು ವೈಟ್ ಡೌಸ್ ಸಂಸ್ಥೆಗೆ ಕರೆದುಕೊಂಡು ಬಂದಾಗ ತನ್ನ ಬಟ್ಟೆಯನ್ನು ಬಿಚ್ಚಿ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದ. ಸಿನಿಮಾದ ಆ್ಯಕ್ಷನ್ನಂತೆ ವೈಟ್ ಡೌಸ್ ಸಂಸ್ಥೆಯಲ್ಲಿರುವ ಇತರ ಮಾನಸಿಕ ಅಸ್ವಸ್ಥರಿಗೆ ಹೊಡೆಯುತ್ತಿದ್ದ. ಆತನಿಗೆ ಇನ್ನೂ ಕೂಡ ಸಿನಿಮಾದ ಹುಚ್ಚಿದೆ. ಆತ ಸ್ವಲ್ಪ ಗುಣಮುಖನಾಗಿದ್ದು, ಅವನು ಕೊಟ್ಟ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಆ ಕಡೆಯವರು ಈತನ ಪರಿಚಯ ಇಲ್ಲ ಎಂದು ಹೇಳಿದ್ದರು. ಆನಂತರ ಅವರೇ ಸಹಾಯ ಮಾಡಿ ತುಕರಾಂನ ಮನೆಯವರನ್ನು ಪತ್ತೆ ಹಚ್ಚಿದ್ದರು. ಇದೀಗ ಆತನ ಮನೆಯವರು ಬಂದು ಕರೆದುಕೊಂಡು ಹೋಗುತ್ತಿದ್ದಾರೆ. ಆತನ ಅಸ್ವಸ್ಥತೆ ಇನ್ನೂ ಕಡಿಮೆಯಾಗಿಲ್ಲ. ಆತನಿಗೆ ಇನ್ನೂ ಚಿಕಿತ್ಸೆಯ ಅಗತ್ಯವಿದೆ" ಎಂದು ಹೇಳಿದರು.
ತುಕಾರಾಂ ಸಿನಿಮಾಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದ. ಈತ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಈ ಸಿನಿಮಾಗಳ ವೀಕ್ಷಣೆಯ ಬಳಿಕ ಈತನ ಅಸ್ವಸ್ಥತೆ ಹೆಚ್ಚಾಗುತ್ತಿತ್ತು. ಯಾವುದೇ ಸಿನಿಮಾ ನೋಡಿದರೂ ಅದರಲ್ಲಿರುವ ಪಾತ್ರ ತಾನಾಗಬೇಕು ಎಂದು ಈತ ಬಯಸುತ್ತಿದ್ದ. ಮತ್ತೆ ಅದೇ ರೀತಿ ಆಗಲು ಈತ ಪ್ರಯತ್ನಿಸುತ್ತಿದ್ದ.
ಈತ ಮಾನಸಿಕ ಅಸ್ವಸ್ಥನಾಗಿ ಈ ಹಿಂದೆ ನಾಲ್ಕು ಬಾರಿ ಮನೆ ಬಿಟ್ಟು ಹೋಗಿದ್ದ. ಆ ಬಳಿಕ ಈತನನ್ನು ಪತ್ತೆಹಚ್ಚಲಾಗಿತ್ತು. ಈತನ ಮಾನಸಿಕ ಅಸ್ವಸ್ಥತೆಯನ್ನು ಸರಿಪಡಿಸಲು ಈತನ ಕುಟುಂಬ ಮಂತ್ರವಾದಿಯ ಮೊರೆ ಹೋಗಿತ್ತು. ಮಾಂತ್ರಿಕನೊಬ್ಬ ಈತನನ್ನು ತನ್ನ ಬಳಿ 15 ದಿನ ಇರಿಸಿ ಗುಣಮುಖನಾಗಿಸುವೆ ಎಂದು ಹೇಳಿದ್ದ. ಮಾಂತ್ರಿಕನ ಬಳಿ ಇದ್ದ ಈತ ಒಂದು ದಿನ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದ. ತನ್ನ ಬಳಿಯಿಂದ ತಪ್ಪಿಸಿಕೊಂಡು ಹೋಗಿದ್ದವ ಮತ್ತೆ ತನ್ನ ಬಳಿಗೆ ಬರುವನೆಂದು ಮಾಂತ್ರಿಕ ನಮ್ಮನ್ನು ಸಮಾಧಾನಪಡಿಸಿದ್ದ ಎಂದು ಸಕಾರಾಂ ಹಳೆಯ ಘಟನೆ ಹೇಳಿಕೊಂಡರು.
ಇದನ್ನೂ ಓದಿ: ಜಾರ್ಖಂಡ್‌ನಿಂದ ಮಂಗಳೂರಿಗೆ ಬಂದು 3 ತಿಂಗಳಿಂದ ನಾಪತ್ತೆಯಾಗಿದ್ದ ಯುವಕ ಕೊನೆಗೂ ಪತ್ತೆ; ಕುಟುಂಬ ಭಾವುಕ