ಮಂಗಳೂರು: ಬಲ್ಗೇರಿಯಾ ದೇಶದಲ್ಲಿ ಉದ್ಯೋಗ, ವೀಸಾ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದುಕೊಂಡು ವೀಸಾ ಕೊಡಿಸದೇ ಹಾಗೂ ಸಾರ್ವಜನಿಕರಿಂದ ಪಡೆದ ಹಣವನ್ನು ವಾಪಸ್ ನೀಡದೆ ಸುಮಾರು 30 ಕ್ಕೂ ಅಧಿಕ ಜನರಿಗೆ ಮೋಸ ಮಾಡಿದ ಆರೋಪಿಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಬಿಜೈ ನ್ಯೂ ರೋಡ್ ನಿವಾಸಿ ಸುಧೀರ್ ರಾವ್ ವಿ ಆರ್(42) ಬಂಧಿತ ಆರೋಪಿ. ಆರೋಪಿತನ ಮೇಲೆ ಈ ಹಿಂದೆ ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮೋಸ ಮಾಡಿದ ಪ್ರಕರಣಗಳು ದಾಖಲಾಗಿದ್ದವು. ಅಂತೆಯೇ ಆರೋಪಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಆದರೆ ಇದೀಗ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿತನ ಮೇಲೆ ಈ ಹಿಂದೆ ಕಾರು ಖರೀದಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೊಸೈಟಿಗಳಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದು ಸೊಸೈಟಿಗಳಿಗೆ ವಂಚಿಸಿರುವ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈತ ಬಲ್ಗೇರಿಯಾ ದೇಶದ ವೀಸಾ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡು ವೀಸಾ ಕೊಡಿಸದೇ ವಂಚಿಸಿದ ಬಗ್ಗೆ ಮೂಡಬಿದಿರೆ ಮತ್ತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ: ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ : 10ಕ್ಕೂ ಹೆಚ್ಚು ಕಾರುಗಳು ಜಖಂ
ಈತನ ವಿರುದ್ಧ ಈಗಾಗಲೇ 8 ಪ್ರಕರಣಗಳು ದಾಖಲಾಗಿದ್ದು, 50 ಲಕ್ಷ ರೂ ಹೆಚ್ಚು ಹಣವನ್ನು ಪಡೆದು ಸಾರ್ವಜನಿಕರಿಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನೂ ಹಲವರಿಗೆ ವಿವಿಧ ರೀತಿಯಲ್ಲಿ ವಂಚನೆ ಮಾಡಿರುವ ಸಾಧ್ಯತೆ ಇರುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧ ಶಂಕಿಸಿ ಅತ್ತಿಗೆ, ಇಬ್ಬರು ಮಕ್ಕಳ ಕೊಲೆಗೈದ ದುರುಳ
ಉಜಿರೆಯಲ್ಲಿ ಮಂಗಳವಾರ ಪೊಲೀಸ್ ನೈತಿಕಗಿರಿ ಪ್ರಕರಣ: ಯುವತಿ ಜೊತೆ ಬಸ್ನಲ್ಲಿ ಮಾತನಾಡಿದ ಎಂಬ ಕಾರಣಕ್ಕೆ ಯುವಕನ ಮೇಲೆ ಕೆಲವರು ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ. ಹಲ್ಲಗೊಳಗಾದ ಯುವಕ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು, ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ತಂದೆಯಿಂದ ಮಗನ ಕೊಲೆ: ಇತ್ತೀಚೆಗಷ್ಟೇ ಮಂಗಳವಾರ ನಡೆದ ಕ್ಷಲ್ಲಕ ಜಗಳದಲ್ಲಿ ತಂದೆಯೇ ಮಗನನ್ನು ಕೊಲೆಗೈದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ನಡೆದಿತ್ತು. ಏರಣಗುಡ್ಡೆ ಮಾತೃಮಜಲು ನಿವಾಸಿ ಶೀನ ಎಂಬಾತ ಮಗ ಶಿವರಾಮ (35) ಎಂಬುವರನ್ನು ಕೊಲೆ ಮಾಡಿದ್ದಾರೆ. ಇಬ್ಬರ ಮಧ್ಯೆ ಕೋಳಿ ಪದಾರ್ಥಕ್ಕಾಗಿ ಜಗಳ ಆರಂಭವಾಗಿತ್ತು. ಈ ವೇಳೆ ಜಗಳ ತೀವ್ರಗೊಂಡು, ಅಪ್ಪನೇ ಮಗನ ತಲೆಗೆ ಹೊಡೆದಿದ್ದಾನೆ. ಪರಿಣಾಮ ಮಗ ಮೃತಪಟ್ಟಿದ್ದಾನೆ. ಕೊಲೆಯಾದ ವ್ಯಕ್ತಿಯ ಪತ್ನಿ ಕವಿತಾ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.