ಸುಳ್ಯ (ದಕ್ಷಿಣ ಕನ್ನಡ): ಸುಳ್ಯದ ಅಜ್ಜಾವರ ಗ್ರಾಮದ ದೊಡ್ಡೇರಿಯ ಮನೆಯೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತುಕೊಂಡು ಮನೆ ಬಹುತೇಕ ಭಾಗ ಬೆಂಕಿಗೆ ಆಹುತಿಯಾಗಿದೆ. ಇದು ಸರೋಜಿನಿ ಎಂಬುವರಿಗೆ ಸೇರಿದ ಮನೆಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಕಿ ಹೊತ್ತುಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಮನೆಯೊಳಗೆ ಬೆಂಕಿ ಕಾಣಿಸಿಕೊಂಡಾಗ ಒಳಗೆ ಸರೋಜಿನಿ, ಪತಿ ಹಾಗೂ ಇಬ್ಬರು ಮಕ್ಕಳಿದ್ದು ಕೂಡಲೇ ಮನೆಯಿಂದ ಹೊರ ಓಡಿಬಂದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಘಟನೆಯ ಮಾಹಿತಿ ತಿಳಿದ ಸುಳ್ಯ ತಹಶೀಲ್ದಾರ್ ಅನಂತ ಶಂಕರ್, ಸುಳ್ಯ ತಾಲೂಕು ಕಂದಾಯ ನಿರೀಕ್ಷಕ ಬಿ. ಕೊರಗಪ್ಪ ಹೆಗ್ಡೆ, ಅಜ್ಜಾವರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಶರತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ವೇಳೆ ಸಂತ್ರಸ್ತರಿಗೆ ಕಂದಾಯ ಇಲಾಖೆ ವತಿಯಿಂದ 50 ಕೆ.ಜಿ ಅಕ್ಕಿ ವಿತರಿಸಲಾಯಿತು.