ಬಂಟ್ವಾಳ: ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಚಿನ್ನದ ಸರ ಎಳೆದು ಪರಾರಿಯಾಗಿದ್ದಾರೆ ಎಂದು ನಂಬಿಸಲು ಹೊರಟ ವೃದ್ಧೆಯ ನಾಟಕ ಬಯಲಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ನಿವಾಸಿಯಾದ ವೃದ್ಧೆ ಜನವರಿ 8 ರಂದು ಪೇಟೆಗೆ ಬಂದು ವಾಪಸ್ ಮನೆಗೆ ತೆರಳುವ ವೇಳೆ ಮನೆ ಪಕ್ಕದಲ್ಲಿ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕುತ್ತಿಗೆಯಲ್ಲಿದ್ದ ಮೂರು ಪವನ್ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಾಗಿ ದೂರಿದ್ದರು. ಈ ವೇಳೆ ಅಜ್ಜಿಯ ಬೆನ್ನಿಗೆ ಗಾಯಗಳಾಗಿದ್ದಾಗಿ ಹೇಳಲಾಗಿತ್ತು. ನೇರವಾಗಿ ಮನೆಗೆ ಹೋದ ಅಜ್ಜಿ ಮಗಳು ಮಂಗಳೂರಿನಿಂದ ಕೆಲಸ ಮುಗಿಸಿ ಬಂದಾಗ ವಿಚಾರ ತಿಳಿಸಿದ್ದಾರೆ. ಈ ಸಂಬಂಧ ಮಗಳು ವೃದ್ಧೆಯನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಘಟನೆ ವಿವರಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನು ಗಂಭೀರ ಪ್ರಕರಣವೆಂದು ಪರಿಗಣಿಸಿ ತನಿಖೆಗಿಳಿದ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್, ನಗರ ಠಾಣೆ ಎಸ್ಐ ಹಾಗೂ ಅಪರಾಧ ವಿಭಾಗ ಎಸ್ಐ ಕಲೈಮಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಪ್ರಕರಣದ ಕುರಿತು ಮಾಹಿತಿ ಕಲೆ ಹಾಕಲು ಶುರು ಮಾಡಿದ್ದಾರೆ. ತನಿಖೆ ವೇಳೆ ಸಿಸಿ ಕ್ಯಾಮರಾ ಫೂಟೇಜ್ ಗಳನ್ನು ಪರಿಶೀಲನೆ ನಡೆಸಲಾಗಿದೆ. ಆದರೆ, ಆ ದಿನ ಅಜ್ಜಿಯ ಮನೆಯ ರಸ್ತೆಯಲ್ಲಿ ಅಂಥ ಯಾವುದೇ ಘಟನೆ ನಡೆದ ಕುರಿತು ಸುಳಿವು ಪೊಲೀಸ್ ತಂಡಕ್ಕೆ ದೊರಕಿಲ್ಲ. ಈ ಹಿನ್ನೆಲೆ ಪೊಲೀಸರು ಅಜ್ಜಿಯ ವಿಚಾರಣೆಗೆ ಮುಂದಾಗಿದ್ದಾರೆ. ಈ ವೇಳೆ ಅಜ್ಜಿ ತಪ್ಪೊಪ್ಪಿಕೊಂಡಿದ್ದಾಳೆ.
ನಡೆದದ್ದೇನು:
ಅಜ್ಜಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಆಕೆ ಯಾವುದೋ ಉದ್ದೇಶದಿಂದ ಸಂಬಂಧಿಕರಿಗೆ ನೀಡಿದ್ದರು. ಬಳಿಕ ಮಗಳು ಬೈಯುತ್ತಾಳೆ ಎಂಬ ಕಾರಣಕ್ಕಾಗಿ ಬೆನ್ನಿಗೆ ಪರಚಿದ ರೀತಿಯಲ್ಲಿ ಗಾಯ ಮಾಡಿಕೊಂಡು ಸರ ಕಳ್ಳತವಾಗಿದೆ ಎಂದು ನಾಟಕವಾಡಿದ್ದಳು. ಈ ರೀತಿ ಪೊಲೀಸರನ್ನೇ ತಬ್ಬಿಬ್ಬುಗೊಳಿಸಿದ ಚಾಲಾಕಿ ಅಜ್ಜಿಯ ವಿರುದ್ಧ ಪ್ರಕರಣ ದಾಖಲಿಸಲು ಸರ್ಕಲ್ ಇನ್ಸ್ಪೆಕ್ಟರ್ ಮುಂದಾಗಿದ್ದಾರೆ.