ಮಂಗಳೂರು: ಜೀವ ಉಳಿಸುವ ವೈದ್ಯರನ್ನು ದೇವರೇ ಎಂಬಂತೆ ಬಿಂಬಿಸುವ ಎಷ್ಟೋ ಮಂದಿಯಿದ್ದಾರೆ. ಅವರಲ್ಲಿ ಅಂತಹ ಧನ್ಯತಾ ಭಾವವಿರುತ್ತದೆ. ಅಂಥಹದ್ದೇ ಘಟನೆಯೊಂದು ನಗರದಲ್ಲಿ ನಡೆದಿದೆ. ಈ ವಿಚಾರವನ್ನು ಸ್ವತಃ ವೈದ್ಯರೇ ತಮ್ಮ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯೊಲಜಿಸ್ಟ್ ಆಗಿರುವ ಡಾ.ಪದ್ಮನಾಭ ಕಾಮತ್ ತಮ್ಮಿಂದ ಚಿಕಿತ್ಸೆ ಪಡೆದವರೊಬ್ಬರು ಕೃತಜ್ಞತೆ ಸಲ್ಲಿಸಿರುವ ಪರಿಯನ್ನು ಫೋಟೋ ಮೂಲಕ ಟ್ವಿಟ್ಟರ್ನಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.
ಮೂರು ವಾರಗಳ ಹಿಂದೆ ಹೃದ್ರೋಗಕ್ಕೆ ತಮ್ಮಿಂದ ಚಿಕಿತ್ಸೆ ಪಡೆದ ವ್ಯಕ್ತಿಯೋರ್ವರು ಚೇತರಿಸಿಕೊಂಡ ಬಳಿಕ ತಮ್ಮೊಂದಿಗೆ ನಡೆದುಕೊಂಡ ಪರಿಗೆ ತಾನು ಮನಸೋತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಹೃದ್ರೋಗದಿಂದ ಬಳಲುತ್ತಿದ್ದ ಈ ವ್ಯಕ್ತಿಗೆ ನಾವು ಆ್ಯಂಜಿಯೋಪ್ಲಾಸ್ಟಿ ಮಾಡಿ ಚಿಕಿತ್ಸೆ ನೀಡಿದ್ದೆವು. ಜೀವ ಉಳಿಸಿರುವ ಕಾರ್ಯ ಮಾಡಿರುವ ನಮಗೆ ಈ ವ್ಯಕ್ತಿಯು ದೇವರ ಪ್ರಸಾದವನ್ನು ತಂದುಕೊಟ್ಟದ್ದಲ್ಲದೆ, ಸಾಷ್ಟಾಂಗ ನಮಸ್ಕಾರ ಮಾಡಲು ಬಂದಿದ್ದಾರೆ. ಇಂಥದ್ದೊಂದು ಕೃತಜ್ಞತೆ ವ್ಯಕ್ತವಾಗಿರುವುದಕ್ಕೆ ಪ್ರತಿಯಾಗಿ ನಾನು ನನ್ನೆಲ್ಲ ರೋಗಿಗಳಿಗೆ ಶಿರಬಾಗುತ್ತೇನೆ. ಈ ರೀತಿಯ ಕೃತಜ್ಞತೆ ನಮ್ಮ ಶ್ರೇಷ್ಠ ಭಾರತೀಯ ಸಂಸ್ಕೃತಿ ಎಂದು ಡಾ. ಪದ್ಮನಾಭ ಕಾಮತ್ ಬರೆದುಕೊಂಡಿದ್ದಾರೆ.