ಸುಬ್ರಹ್ಮಣ್ಯ: ಗ್ರಾಮದ ಅಭಿವೃದ್ಧಿಗೆ ಸಮಾಜದ ಎಲ್ಲರೂ ಸಂಘಟಿತರಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಮನೋಭಾವ ಮುಖ್ಯ ಮತ್ತು ಇಂತಹ ಪ್ರಯತ್ನ ಪತ್ರಕರ್ತರ ಗ್ರಾಮ ವಾಸ್ತವ್ಯ ಶಿಬಿರದಲ್ಲಿ ನಡೆದಿರುವುದನ್ನು ನಾನು ಗುರುತಿಸಿದ್ದೇನೆ ಎಂದು ಸಚಿವ ಎಸ್.ಅಂಗಾರ ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕೊಂಬಾರು ಶಾಲೆಯಲ್ಲಿ ಜ.31 ರಂದು ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಶಿಬಿರಕ್ಕೆ ಸಹಕಾರ ನೀಡಿದವರಿಗೆ ಫೆ.7 ರಂದು ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಸ್.ಅಂಗಾರ, ಗ್ರಾಮಾಭಿವೃದ್ಧಿಗೆ ಪೂರಕ ಕೆಲಸ ಮಾಡುವ ಯಾವುದೇ ಸಂಸ್ಥೆಗಳಿಗೆ ತಾನು ಬೆಂಬಲ ನೀಡುತ್ತೇನೆ. ಕೊಂಬಾರು, ಸಿರಿಬಾಗಿಲು ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನದ ಅಗತ್ಯವಿದೆ. ಈ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಗ್ರಾಮ ವಾಸ್ತವ್ಯಕ್ಕೆ ಶ್ರಮಿಸಿದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು, ಕಡಬ ತಾಲೂಕು ಪತ್ರಕರ್ತರ ಸಂಘದ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಡಬ ಪತ್ರಕರ್ತರ ಸಂಘದ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಓದಿ: ಆನ್ಲೈನ್ನಲ್ಲಿ ಗೋವರ್ಧನ ಬೆಟ್ಟದ ಕಲ್ಲು ಮಾರಾಟ: IndiaMART ಸಿಇಒ ಸೇರಿ ಮೂವರ ವಿರುದ್ಧ ಎಫ್ಐಆರ್