ಮಂಗಳೂರು: ಗೋವುಗಳ ಅಕ್ರಮ ವಧೆ ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಮತ್ತೆ ಆಸ್ತಿ ಮುಟ್ಟುಗೋಲು ಹಾಕಲಾಗಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಅಧಿನಿಯಮ 2020ರ ಕಲಂ 8(4) ಹಾಗೂ 8(5)ರಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗೋವು ಅಕ್ರಮ ವಧೆ ಪ್ರಕರಣದಲ್ಲಿ ನಾಲ್ಕು ಕಡೆ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ.
ಇಲ್ಲಿನ ಅಡ್ಕೂರು ಗ್ರಾಮದ ಅದ್ಯಪಾಡಿಯಲ್ಲಿ, ಬಜಾಲ್ ಪಕಲಡ್ಕ, ಜಲ್ಲಿಗುಡ್ಡೆ, ಕಟ್ಟಪುನಿಯ 4 ಕಸಾಯಿಖಾನೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. ಈ ಬಗ್ಗೆ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮದನಮೋಹನ್ ಸಿ. ಆದೇಶ ಹೊರಡಿಸಿದ್ದಾರೆ.
ಇನ್ನು ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ ವಾಹನ ಹಾಗೂ ಇತರ ಸ್ವತ್ತುಗಳನ್ನು ಸಕ್ಷಮ ಪ್ರಾಧಿಕಾರಿಗಳಿಂದ ಮೌಲ್ಯಮಾಪನ ಮಾಡಿಸಿ, ಅಂದಾಜು ಮೌಲ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕಂಕನಾಡಿ ಪೊಲೀಸರಿಗೆ ಸೂಚಿಸಲಾಗಿದೆ. ಮಂಗಳೂರು ತಾಲೂಕು ತಹಶೀಲ್ದಾರ್ ಜಮೀನಿಗೆ ಸಂಬಂಧಪಟ್ಟಂತೆ ಪಹಣಿ ಪತ್ರದ ಕಲಂ 11ರಲ್ಲಿ ಮುಂದಿನ ಆದೇಶದವರೆಗೆ ನ್ಯಾಯಾಲಯದಿಂದ ಜಪ್ತಿ ಆಗಿರುವ ಬಗ್ಗೆ ನಮೂದು ಮಾಡುವಂತೆ ಹಾಗೂ ಪಂಚಾಯತ್ ದಾಖಲೆಗಳಲ್ಲೂ ಈ ಬಗ್ಗೆ ನಮೂದು ಮಾಡುವಂತೆಯೂ ಆದೇಶದಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ : ಕಾರವಾರ: ಕಾಳಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯನ್ನು ಹೊತ್ತೊಯ್ದ ಮೊಸಳೆ