ಬೆಳ್ತಂಗಡಿ: ಕಕ್ಕಿಂಜೆ ಸನಿಹದ ಚಿಬಿದ್ರೆ ಗ್ರಾಮದ ಅನ್ನಾರು ನದಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಬಾಲಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಇಹಾನ್ (8) ಮೃತ ಬಾಲಕ. ಅನಾರೋಗ್ಯ ಪೀಡಿತ ಅಜ್ಜಿಯ ಯೋಗಕ್ಷೇಮ ವಿಚಾರಿಸಲು ಚಿಕ್ಕಮಗಳೂರಿನಿಂದ ಬಂದಿದ್ದ ಬಾಲಕ ದಡ್ಡು ನಿವಾಸಿ ಪುತ್ತಾಕ ಅವರ ಮೊಮ್ಮಗ. ಅಜ್ಜಿಗೆ ಅನಾರೋಗ್ಯ ಇದ್ದುದರಿಂದ ತಂದೆ, ತಾಯಿ ಜೊತೆ ರವಿವಾರ ಬೆಳಗ್ಗೆ ಬಾಲಕ ಕಕ್ಕಿಂಜೆಗೆ ಬಂದಿದ್ದ. ಉಪಹಾರ ಮುಗಿಸಿ ಮನೆ ಮಂದಿ ಎಲ್ಲರೂ ಜೊತೆ ಸೇರಿ ಎಂದಿನಂತೆ ಮನೆಯ ಪಕ್ಕದಲ್ಲೇ ಇರುವ ನದಿಗೆ ಬಟ್ಟೆ ಒಗೆಯಲು ತೆರಳಿದ್ದರು.
ಈ ವೇಳೆ ನದಿ ಪಾತ್ರದಲ್ಲಿ ಆಟದಲ್ಲಿ ನಿರತನಾಗಿದ್ದ ಬಾಲಕ ಎಲ್ಲರ ಕಣ್ಣ ಮುಂದೆಯೇ ಆಯತಪ್ಪಿ ನೀರಿನಲ್ಲಿ ಬಿದ್ದಿದ್ದಾನೆ. ತಕ್ಷಣ ಬಾಲಕನ ಮಾವ ದಡ್ಡು ಸೂಫಿ ಸಹಿತ ಇತರರು ಬಾಲಕನನ್ನು ನೀರಿನಿಂದ ಮೇಲೆತ್ತಿ ಕಕ್ಕಿಂಜೆ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿಂದ ಬೆಳ್ತಂಗಡಿ ಆಸ್ಪತ್ರೆಗೆ ಕರೆ ತರುವ ದಾರಿ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ.
ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.