ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎಂಟು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 386ಕ್ಕೆ ಏರಿಕೆಯಾಗಿದೆ.
ಸೌದಿಯಿಂದ ಬಂದ 43, 25 ವಯಸ್ಸಿನ ಇಬ್ಬರು ಪುರುಷರು, ಮಹಾರಾಷ್ಟ್ರದಿಂದ ಬಂದ 60 ವರ್ಷದ ಓರ್ವ ವ್ಯಕ್ತಿ ಮತ್ತು ರೋಗಿ ಸಂಖ್ಯೆ 6282 ರ ಸಂಪರ್ಕ ಹೊಂದಿದ್ದ 12,38,30 ವಯಸ್ಸಿನ ಮೂವರು ಮಹಿಳೆಯರು ಮತ್ತು 42 ವಯಸ್ಸಿನ ಓರ್ವ ಪುರುಷನಿಗೆ ಕೊರೊನಾ ದೃಢಪಟ್ಟಿದೆ.
ಓರ್ವ ಬಿಡುಗಡೆ:
60 ವರ್ಷ ವಯಸ್ಸಿನ ವ್ಯಕ್ತಿಯು ಇಂದು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇವರ ಗಂಟಲು ದ್ರವದ ಪರೀಕ್ಷೆ ಎರಡು ಬಾರಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಇವರನ್ನು ಗುಣಮುಖರೆಂದು ಘೋಷಿಸಿ ಮನೆಗೆ ಕಳುಹಿಸಲಾಗಿದೆ.
ಜಿಲ್ಲೆಯ ಒಟ್ಟು 386 ಕೊರೊನಾ ಸೋಂಕಿತರಲ್ಲಿ ಈವರೆಗೂ 8 ಮಂದಿ ಸಾವನ್ನಪ್ಪಿದ್ದಾರೆ. 170 ಮಂದಿ ಗುಣಮುಖರಾಗಿದ್ದು, 209 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.