ಮಂಗಳೂರು: ಇತ್ತೀಚೆಗೆ ನಗರದಲ್ಲಿನ ಎರಡು ಕಾಲೇಜುಗಳಲ್ಲಿ ರ್‍ಯಾಗಿಂಗ್ ಪ್ರಕರಣಗಳು ನಡೆದು 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೀಗ ಮತ್ತೆರಡು ಕಾಲೇಜಿನಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣ1:
ನಗರದ ಪಂಪ್ವೆಲ್ ಬಳಿಯ ಸೈಮನ್ ಲೇನ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಲ್ಮಠದಲ್ಲಿರುವ ಯೆನೆಪೊಯ ಕಾಲೇಜಿನ ಪ್ರಥಮ ವರ್ಷದ ಬಿಬಿಎ 9 ವಿದ್ಯಾರ್ಥಿಗಳಿಗೆ ಅದೇ ಕಾಲೇಜಿನ ಮೂವರು ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್ ನಡೆಸಿದ್ದಾರೆ. ಈ ವಿದ್ಯಾರ್ಥಿಗಳೆಲ್ಲರೂ ಕೇರಳ ಮೂಲದವರು. ರ್‍ಯಾಗಿಂಗ್ ಮಾಡುವ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ವಾಸವಾಗಿದ್ದರೆ, ರ್‍ಯಾಗಿಂಗ್‌ಗೆ ಒಳಗಾದ ವಿದ್ಯಾರ್ಥಿಗಳು ಪಂಪ್‌ವೆಲ್ ಬಳಿಯ ಸೈಮನ್ ಲೇನ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಕೇರಳದ ಪಯ್ಯಂಗಡಿ ಮೂಲದ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿ ಮಹಮ್ಮದ್ ಆದಿಲ್(20), ಕಲ್ಲಿಕೋಟೆ ಮೂಲದ ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿ ರಿಜಿನ್ ರಿಯಾಝ್(20), ಕಣ್ಣೂರು ಮೂಲದ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿ ಮುಹಮ್ಮದ್ ನಿಜಾಮುದ್ದೀನ್ ಬಿಪಿ(20) ಎಂಬ ವಿದ್ಯಾರ್ಥಿಗಳು ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ವರ್ಷದ 9 ವಿದ್ಯಾರ್ಥಿಗಳು ವಾಸಿಸುವ ಬಾಡಿಗೆ ಮನೆಗೆ ಬಂದು ನಿತ್ಯವೂ ರ್‍ಯಾಗಿಂಗ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಆರೋಪಿತ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ 10 ನಿಮಿಷಗಳ ಒಳಗೆ ಗಡ್ಡಮೀಸೆ ಶೇವಿಂಗ್ ಮಾಡಬೇಕು. ಅಲ್ಲದೆ ಕೆಲವೊಂದು ವಿಭಾಗದ ವಿದ್ಯಾರ್ಥಿಗಳಲ್ಲಿ ಮಾತನಾಡಬಾರದು ಎಂದು ರ್‍ಯಾಗಿಂಗ್ ಮಾಡಿದ್ದಾರೆ. ಈ ಬಗ್ಗೆ ಪ್ರಥಮ ವರ್ಷದ ಕೆವಿನ್ ಮಥಾಲ್ ಜೇಕೋಬ್ ಎಂಬ ವಿದ್ಯಾರ್ಥಿ ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣ 2:
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕ ಶ್ರೀನಿವಾಸ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಕಾರ್ತಿಕ್ ಶೆಟ್ಟಿ ಎಂಬಾತನಿಗೆ ಅದೇ ಕಾಲೇಜಿನ 3ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಮೊಹಮ್ಮದ್ ಬಾಝಿಲ್(22), ಸಂಭ್ರಮ್ ಆಳ್ವ(20), ಅಶ್ವಿನ್ ಎಸ್.ಜಾನ್ಸನ್(22), ಕೆ.ಯು.ಶಮೀರ್(22) ರ್‍ಯಾಗಿಂಗ್ ಮಾಡಿದ್ದಾರೆಂದು ದೂರು ದಾಖಲಾಗಿದೆ.
ಈ ಬಗ್ಗೆ ಶ್ರೀನಿವಾಸ ಕಾಲೇಜಿನ ಡಿಸಿಪ್ಲಿನ್ ಕಮಿಟಿಗೆ ವಿದ್ಯಾರ್ಥಿ ದೂರು ನೀಡಿದ್ದು, ಇದರಲ್ಲಿ ರ್‍ಯಾಗಿಂಗ್ ನೀಡಿರೋದು ಸಾಬೀತಾಗಿತ್ತು. ಈ ಹಿನ್ನೆಲೆ ಮಾರ್ಚ್ 3ರಂದು ಸುರತ್ಕಲ್ ಠಾಣೆಯಲ್ಲಿ ಕಾಲೇಜು ವತಿಯಿಂದ ಪ್ರಕರಣ ದಾಖಲಿಸಲಾಗಿತ್ತು.
ದೂರು ದಾಖಲಾದ ಬಳಿಕ ಮೊಹಮ್ಮದ್ ಬಾಝಿಲ್, ಸಂಭ್ರಮ್ ಆಳ್ವ, ಕೆ.ಯು.ಶಮೀರ್ ಎಂಬ ವಿದ್ಯಾರ್ಥಿಗಳು ಕಾಲೇಜಿನ ಕೆಮಿಸ್ಟ್ರಿ ವಿಭಾಗದ ಉಪನ್ಯಾಸಕ ಡಾ.ಪ್ರವೀಣ್ ಅವರೊಂದಿಗೆ ಅಗೌರವಾಗಿ ನಡೆದುಕೊಂಡಿದ್ದು, ಅವರನ್ನು ಎಳೆದಾಡಿ ಗಲಾಟೆ ಮಾಡಿದ್ದಾರೆ. ಇದೀಗ ಈ ವಿದ್ಯಾರ್ಥಿಗಳ ಮೇಲೆ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣವೂ ದಾಖಲು ಮಾಡಿ ಆರೋಪಿತ ವಿದ್ಯಾರ್ಥಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಕಾಲೇಜಿನಲ್ಲಿ ರ್‍ಯಾಗಿಂಗ್ ಪ್ರಕರಣ: 9 ವಿದ್ಯಾರ್ಥಿಗಳ ಬಂಧನ