ಬಂಟ್ವಾಳ(ದಕ್ಷಿಣ ಕನ್ನಡ): ತುರ್ತು ಅಗತ್ಯವಿದ್ದಾಗ ಜಾತಿ, ಮತ, ಧರ್ಮಗಳನ್ನು ಮೀರಿ ಬೇಡಿಕೆ ಇರುವುದು ರಕ್ತಕ್ಕೆ. ಕೋವಿಡ್ ನ ಗೊಂದಲ, ಓಡಾಟ ಸಮಸ್ಯೆ, ಆಸ್ಪತ್ರೆಗಳಲ್ಲೂ ಆತಂಕದ ಸನ್ನಿವೇಶ ಇರುವ ಈ ಕಾಲಘಟ್ಟದಲ್ಲಿ ಒಂದೇ ಕುಟುಂಬದ ಯುವಕರು ಅಗತ್ಯವಿದ್ದವರಿಗೆ ಒಟ್ಟಾಗಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬ್ಲಡ್ ಹೆಲ್ತ್ ಕೇರ್ ಕರ್ನಾಟಕದ ಮೂಲಕ ಇವರು ರಕ್ತದಾನ ಮಾಡಿದ್ದು, ಇವರ ನಡೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಏಳು ಮಂದಿಯಲ್ಲಿ ಶಿಯಾಬ್, ನಿಝಾಮ್, ಸಾಜಿದ್, ಅಜರುದ್ದಿನ್ ಅಣ್ಣತಮ್ಮಂದಿರು ಹಾಗೂ ರಶೀದ್, ರಮ್ಲಾನ್ ಇಬ್ಬರೂ ಸೋದರರು, ನವಾಝ್ ಎಂಬುವವರು ಇವರ ಬಂಧು.
"ನಮ್ಮ ಕುಟುಂಬದವರೊಬ್ಬರಿಗೆ ಅಗತ್ಯ ಸನ್ನಿವೇಶದಲ್ಲಿ ರಕ್ತ ಬೇಕಾದಾಗ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಕಾಲಕ್ಕೆ ನೆರವು ನೀಡಿದೆ. ಇದು ನಮಗೂ ರಕ್ತದಾನ ಮಾಡಲು ಪ್ರೇರಣೆಯಾಯಿತು. ಈ ಹಿನ್ನೆಲೆಯಲ್ಲಿ ಈಗಾಗಲೇ ನಾವು ಒಂದು ಬಾರಿ ಒಟ್ಟಾಗಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಮೂಲಕ ರಕ್ತದಾನ ಮಾಡಿದ್ದೇವೆ. ಇದೀಗ ಮೊನ್ನೆ ಅವರ ಕೋರಿಕೆಯಂತೆ ಮತ್ತೆ ತುರ್ತು ನೆರವಿಗೆ ಧಾವಿಸಿದೆವು. ನಮ್ಮ ಕೈಲಾದಷ್ಟು ಸಹಾಯ ಮಾಡಿ ಇನ್ನೊಬ್ಬರಿಗೆ ನೆರವಾಗುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಈ ಕಾರ್ಯ ನಡೆಸುತ್ತಿದ್ದು, ಇದರಲ್ಲಿ ತೃಪ್ತಿ, ಸಮಾಧಾನ ಇದೆ" ಎಂದು ಹೇಳುತ್ತಾರೆ ಶಿಹಾಬ್.