ಬೆಳ್ತಂಗಡಿ (ದಕ್ಷಿಣ ಕನ್ನಡ): ಈ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದೇಶಾದ್ಯಂತ ಸುಮಾರು 40 ಸಾವಿರಕ್ಕೂ ಅಧಿಕ ಮನೆಗಳಲ್ಲಿ ಯೋಗಾಭ್ಯಾಸ ಮಾಡುವ ಮೂಲಕ 6ನೇ ವಿಶ್ವ ಯೋಗ ದಿನದ ಆಚರಣೆ ಮಾಡಲಾಗುತ್ತದೆ ಎಂದು ಉಜಿರೆ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.
ಸದೃಢ, ಸಶಕ್ತ, ಸ್ವಾಸ್ಥ್ಯ ಜೀವನಕ್ಕಾಗಿ ಯೋಗ ಎಂಬ ಪರಿಕಲ್ಪನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಜೂನ್ 21 ರಂದು ಬೆಳಗ್ಗೆ 7 ರಿಂದ 8 ಗಂಟೆ ತನಕ ತಮ್ಮ ಮನೆಯಲ್ಲಿಯೇ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವ ಮೂಲಕ ವಿಶ್ವ ಯೋಗ ದಿನಾಚರಣೆ ಮಾಡಬೇಕು ಎಂದು ಅವರು ಹೇಳಿದರು.
ಶನಿವಾರ ಉಜಿರೆ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ. ಪ್ರಧಾನಮಂತ್ರಿ ಮೋದಿಯವರ ಆಶಯದಂತೆ ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ನಿರ್ದೇಶನದಲ್ಲಿ 'ನನ್ನ ಜೀವನ-ಯೋಗ ಜೀವನ. ಮನೆಯೇ ಮೊದಲ ಯೋಗ ಚಾವಡಿ' ಎಂಬ ವಿಭಿನ್ನ ಶೀರ್ಷಿಕೆಯಡಿ ವಿಶ್ವಯೋಗ ದಿನ ನಡೆಯಲಿದೆ. ಕಳೆದ 5 ವರ್ಷಗಳಿಂದ ಬೇರೆ ಬೇರೆ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ-ಕಾಲೇಜಿನ ಮಕ್ಕಳನ್ನು ತರಬೇತುಗೊಳಿಸಿ ಒಂದೇ ವೇದಿಕೆಯಲ್ಲಿ ಯೋಗ ಪ್ರದರ್ಶಿಸಲ್ಪಡುತ್ತಿತ್ತು. ಈ ವರ್ಷ ಯೋಗವು ಮನೆ ಮನೆಗಳಲ್ಲಿ ಪ್ರಾರಂಭವಾಗಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದರು.
ವಿಶ್ವ ಯೋಗ ದಿನಾಚರಣೆ ಮಾಡಲು ಆಚರಣಾ ಸಮಿತಿ ರಚಿಸಲಾಗಿದ್ದು, ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಗೌರವಾಧ್ಯಕ್ಷರಾಗಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಕಾರ್ಯಾಧ್ಯಕ್ಷರಾಗಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಉಪಾಧ್ಯಕ್ಷರಾಗಿ, ಶಾಂತಿವನ ಟ್ರಸ್ಟ್ ಕಾರ್ಯಾದರ್ಶಿ ಸೀತಾರಾಮ ತೋಳ್ಪಾಡಿತ್ತಾಯ ಸಂಘಟಣಾ ಕಾರ್ಯಾದರ್ಶಿಯಾಗಿ ಸಹಕಾರ ನೀಡುತ್ತಿದ್ದಾರೆ ಎಂದರು.