ಬೆಳ್ತಂಗಡಿ: ತಾಲೂಕಿನ ನಿತ್ಯಾನಂದ ನಗರದಲ್ಲಿರುವ ಧರ್ಮಸ್ಥಳದ ಶ್ರೀ ರಾಮ ಕ್ಷೇತ್ರದಲ್ಲಿ 26/03/2020 ರಿಂದ 02/04/2020 ರ ವರೆಗೂ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಸಮಾರಂಭ, ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಲಿರುವುದು ಎಂದು ಜಗದ್ಗುರು ಪೀಠದ ಪೀಠಾಧೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಇಂದು ದೇವಸ್ಥಾನದ ವಠಾರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ 60ನೇ ವರ್ಷದ ಉತ್ಸವದ ಆಚರಣೆ ಕುರಿತು ತಿಳಿಸಿದರು. 7 ದಿನ ನಡೆಯುವ ಅಹೋರಾತ್ರಿ ಭಜನೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಭಜನಾ ತಂಡಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಂದು ರಾಮನಾಮ ಸಪ್ತಾಹದ ಉದ್ಘಾಟನೆಯನ್ನು ಉಜಿರೆಯ ಧ.ಮಂ.ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಶ್ರೀ ಬಿ. ಯಶೋವರ್ಮ ಅವರು ನೆರವೇರಿಸಲಿದ್ದಾರೆ. ರಾಮ ತಾರಕ ಮಂತ್ರದ ನಾಮೋಚ್ಛಾರಣೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾಡಲಿದ್ದಾರೆ ಎಂದು ತಿಳಿಸಿದರು.
ಜಾತ್ರೋತ್ಸವದ ಕಾರ್ಯಕ್ರಮಗಳಲ್ಲಿ ರಾಜ್ಯದ ಬಹತೇಕ ಸಚಿವರುಗಳು, ಶಾಸಕರುಗಳು, ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ಬಲಿ ಉತ್ಸವಗಳು, ಚಂದ್ರಮಂಡಲ, ಪುಷ್ಪರಥ, ಬೆಳ್ಳಿರಥ, ಹನುಮಾನ್ ರಥೋತ್ಸವಗಳು ನಡೆಯಲಿದ್ದು, ಪ್ರತೀ ದಿನವೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿರುವುದು ಎಂದು ತಿಳಿಸಿದರು.