ಬೆಳ್ತಂಗಡಿ: ಕೋವಿಡ್19 ಬಿಕ್ಕಟ್ಟಿನ ಪರಿಸ್ಥಿತಿಗೆ ನೆರವಾಗಲೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ರೂ. 5 ಕೋಟಿ ದೇಣಿಗೆಯನ್ನು ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೇಣಿಗೆ ನೀಡಿದರು. ಆನಂತರ ಕೊರೊನಾ ಜಾಗೃತಿ ಭಾಷಣ ಮಾಡಿದರು.
ಎಲ್ಲ ಸ್ವಸಹಾಯ ಸಂಘಗಳ ಸದಸ್ಯರು ಶಿಸ್ತನ್ನು ಕಾಪಾಡಿಕೊಳ್ಳಬೇಕು. ಸರ್ಕಾರ ಸೂಚಿಸಿರುವಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಲಾಕ್‍ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ, ಮನೆಯಲ್ಲಿರುವ ಹಿರಿಯರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.
ಇನ್ನೂ ಲಾಕ್‍ಡೌನ್ ಅಂತಿಮಗೊಂಡ ನಂತರವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರ ವಹಿಸುವ ಬಗ್ಗೆ ಸಂಘದ ಸದಸ್ಯರೆಲ್ಲರಿಗೂ ತರಬೇತಿ ನೀಡುವುದು ಅತ್ಯವಶ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಎಲ್ಲ ಸ್ವಸಹಾಯ ಸಂಘಗಳ ಸದಸ್ಯರು, ಅವರ ಕುಟುಂಬ ವರ್ಗದವರು ಮತ್ತು ಜನತೆ ಜಾಗೃತವಾಗುವಂತೆ ಅವರು ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್ ಮಂಜುನಾಥ್ ಮಾತನಾಡಿ, ಶ್ರೀ ಕ್ಷೇತ್ರದಿಂದ ನೀಡಿದ ದೇಣಿಗೆ ರೂ. 5 ಕೋಟಿ ಮೊತ್ತವನ್ನು ಪಿಎಂ ಪರಿಹಾರ ನಿಧಿಗೆ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ರಾಜ್ಯದಾದ್ಯಂತ ಘೋಷಿಸಲಾಗಿರುವ ಲಾಕ್‍ಡೌನ್‍ನಿಂದ ತೊಂದರೆಗೊಳಗಾಗಿರುವ ಕುಟುಂಬಗಳ ಸ್ಥಳೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು ಪೂರೈಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಾಣಿಗಳಿಗೆ ಆಹಾರ,,, ಕೂಲಿ ಕಾರ್ಮಿಕರಿಗೆ ರಾತ್ರಿ ಊಟ:
ಹುಬ್ಬಳ್ಳಿ-ಧಾರವಾಡದಲ್ಲಿ ಬೀದಿಯಲ್ಲಿ ತಿರುಗುವ ದನ, ನಾಯಿ ಮುಂತಾದ ಪ್ರಾಣಿಗಳಿಗೆ ಆಹಾರ ನೀಡಲಾಗುತ್ತಿದೆ. ಉಡುಪಿಯಲ್ಲಿ ಕೂಲಿ ಕಾರ್ಮಿಕರಿಗೆ ರಾತ್ರಿ ಊಟದ ವ್ಯವಸ್ಥೆ, ಬೆಂಗಳೂರಿನಲ್ಲಿ ಸರ್ವೇ ಕಾರ್ಯಕರ್ತರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಹಾಗೂ ಹಲವೆಡೆಗಳಲ್ಲಿ ಆಹಾರ ಸಾಮಗ್ರಿಗಳನ್ನು ಯೋಜನೆಯು ಒದಗಿಸುತ್ತಿದ್ದು, ತೊಂದರೆಗೊಳಗಾದವರು ಸಹಾಯದ ಅಗತ್ಯವಿದ್ದಲ್ಲಿ ಸ್ಥಳೀಯ ಸೇವಾಪ್ರತಿನಿಧಿಯನ್ನು ಸಂಪರ್ಕಿಸಬಹುದು.