ಮಂಗಳೂರು: ಸುರತ್ಕಲ್ ಭಾಗದಲ್ಲಿ ಕೈಗಾರಿಕಾ ಕಂಪನಿಗಳು ಹೊರಬಿಡುತ್ತಿರುವ ಮಾರಕ ತ್ಯಾಜ್ಯದಿಂದ ತೋಕೂರು ಹಳ್ಳದಲ್ಲಿ ಸಾವಿರಾರು ಮೀನುಗಳ ಮಾರಣಹೋಮ ನಡೆದಿದೆ.
ತೋಕೂರು ಹಳ್ಳದಲ್ಲಿ ಮಾಲ, ಮಡೆಂಜಿ, ಇರ್ಪೆ, ಕ್ಯಾವಜ್ ಸೇರಿದಂತೆ ಸುಮಾರು 400 ಕೆಜಿಯಷ್ಟು ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಿವೆ. ಘಟನೆಯ ಹಿನ್ನೆಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ.ಮಹೇಶ್ವರಿ ಸಿಂಗ್ ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದರು. ಬಳಿಕ ಸತ್ತಿರುವ ಮೀನುಗಳು ಹಾಗೂ ನೀರಿನ ಸ್ಯಾಂಪಲ್ಅನ್ನು ಲ್ಯಾಬ್ಗೆ ರವಾನಿಸಿದ್ದಾರೆ.
ಇದನ್ನೂ ಓದಿ: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ : ಕೆರೆಯಲ್ಲಿ ಮೀನುಗಳ ಮಾರಣಹೋಮ
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಂಆರ್ಪಿಎಲ್ ಕಂಪನಿಯು ಸುತ್ತಮುತ್ತಲಿನ ಪರಿಸರದ ಮೇಲೆ ಮಾಡುತ್ತಿರುವ ಮಾರಕ ಮಾಲಿನ್ಯದ ಕುರಿತು ನಾವು ವರ್ಷಗಳಿಂದ ಸತತ ಹೋರಾಟ ಮಾಡುತ್ತಾ ಬಂದಿದ್ದು, ಜಿಲ್ಲಾಡಳಿತ, ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಆಗಸ್ಟ್ನಲ್ಲಿ ಎರಡು ಬಾರಿ ಇದೇ ಸಮಸ್ಯೆಯನ್ನ ಮುಂದಿಟ್ಟುಕೊಂಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದೆವು. ಈ ಸಂದರ್ಭ ಎಂಆರ್ಪಿಎಲ್ ಸೇರಿದಂತೆ ಇದೇ ರೀತಿ ತ್ಯಾಜ್ಯವನ್ನು ಸ್ಥಳೀಯ ಜಲಮೂಲಗಳಿಗೆ ಬಿಡುತ್ತಿರುವ ಕಂಪನಿಗಳ ಮೇಲೆ ಕ್ರಮಕೈಗೊಳ್ಳಬೇಕೆಂಬ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಆದರೆ ಸರ್ಕಾರವು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕೀರ್ತಿ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಕೈ ತೊಳೆದು ಕೊಂಡಿತ್ತೇ ವಿನಃ ಕಂಪನಿಗಳ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ಸಾವಿರಾರು ಮತ್ಸ್ಯಗಳ ಮಾರಣಹೋಮ: ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ನಿರ್ವಹಣೆ ಕೊರತೆ?