ಮಂಗಳೂರು: ಪಿಲಿಕುಳ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಕೃತಕ ಕಾವು ಪಡೆದು 38 ಕಾಳಿಂಗ ಸರ್ಪದ ಮರಿಗಳು ಜನಿಸಿವೆ.
ಸುಳ್ಯದ ಸಂಪಾಜೆ ಪರಿಸರದಲ್ಲಿ ಸೆರೆ ಹಿಡಿದು ತಂದಿದ್ದ ಎಂಟು ವರ್ಷದ ನಾಗಿಣಿ ಹಾಗೂ ಪಿಲಿಕುಳದಲ್ಲೇ ಹುಟ್ಟಿದ್ದ 10 ವರ್ಷದ ನಾಗೇಂದ್ರ ಈ ಮರಿಗಳ ತಂದೆ - ತಾಯಿಗಳಾಗಿವೆ. ಇಲ್ಲಿನ ಸಂತಾನೋತ್ಪತ್ತಿ ಕೇಂದ್ರದಲ್ಲಿ ನಾಗಿಣಿ ಮೊಟ್ಟೆ ಇಟ್ಟಿದ್ದು, ಆ ಮೊಟ್ಟೆಗಳನ್ನು ಇನ್ಕ್ಯುಬೇಟರ್‌ನಲ್ಲಿಟ್ಟು 76 ದಿನಗಳ ನಂತರ ಮರಿಗಳು ಮೊಟ್ಟೆಯಿಂದ ಹೊರ ಬಂದಿವೆ.
2010-11 ರಲ್ಲಿ ಇಲ್ಲಿ ವಿಶ್ವದಲ್ಲೇ ಪ್ರಥಮ ಬಾರಿಗೆ ಅಸಾಧ್ಯ ಎಂದು ಪರಿಗಣಿಸಲಾಗಿದ್ದ ಸಂರಕ್ಷಿತ ಪರಿಸರದಲ್ಲಿನ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಮಾಡಿದ ದಾಖಲೆ ಪಿಲಿಕುಳ ಉದ್ಯಾನಕ್ಕಿದೆ. 100 ಕಾಳಿಂಗ ಸರ್ಪದ ಮರಿಗಳನ್ನು ಕೃತಕ ಕಾವು ಮೂಲಕ ಮರಿ ಮಾಡಲಾಗಿತ್ತು.
ಮೂರು ಹಾವುಗಳು ನೂರು ಮೊಟ್ಟೆ ಇಟ್ಟಿದ್ದವು. ಈ ಪೈಕಿ 35 ಮರಿಗಳನ್ನು ಪ್ರಾಣಿಗಳ ವಿನಿಮಯ ಯೋಜನೆಯಡಿ ದೇಶದಾದ್ಯಂತ ವಿವಿಧ ಮೃಗಾಲಯಗಳಿಗೆ ಕಳುಹಿಸಲಾಗಿತ್ತು. ಉಳಿದ 65ನ್ನು ಕಾಡಿಗೆ ಬಿಡಲಾಗಿತ್ತು.
ಈ ವರ್ಷ ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರವು ಪಿಲಿಕುಳ ಮೃಗಾಲಯಕ್ಕೆ ಕಾಳಿಂಗ ಸರ್ಪ ಮತ್ತು ಮಲಬಾರ್ ಕೆಂಚಳಿಲಿನ ಸಂತಾನೋತ್ಪತ್ತಿ ಯೋಜನೆ ನೀಡಿತ್ತು. ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಈಗ 14 ಕಾಳಿಂಗ ಸರ್ಪಗಳಿವೆ.
ಅವುಗಳ ಪೈಕಿ ಒಂಬತ್ತು ಗಂಡು ಹಾಗೂ ಐದು ಹೆಣ್ಣು ಸರ್ಪಗಳಿವೆ ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ಓದಿ: ಅತಿವೃಷ್ಟಿ ಹಾನಿ ಎದುರಿಸಲು ಜಿಲ್ಲಾಡಳಿತದಿಂದ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ