ಮಂಗಳೂರು: ಸರಕಾರ ಸ್ಥಳೀಯ ಸಂಸ್ಕೃತಿ, ಆಚರಣೆಗಳಿಗೆ ಆಧ್ಯತೆ ನೀಡಿ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಬೇಕು. ಸ್ಥಳೀಯ ಸಂಸ್ಕೃತಿ ಆಚರಣೆ ವೈವಿಧ್ಯತೆಗಳ ಬಗ್ಗೆ ವೆಬ್ಸೈಟಟ್ಗಳ ಮೂಲಕ ಮಾಹಿತಿ ಲಭ್ಯವಾದಲ್ಲಿ ಹೆಚ್ಚು ಹೆಚ್ಚು ರೀತಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಹೇಳಿದರು.
ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಎರಡನೇ ದಿನವಾದ ಇಂದು ರಾಣಿ ಅಬ್ಬಕ್ಕ ಕ್ರೂಸ್ನಲ್ಲಿ ನಡೆದ ವಿಶೇಷ ಚಿಂತನ ಮಂಥನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರಾವಳಿ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಕುರಿತಂತೆ ನೀಡಲಾಗುವ ಭರವಸೆಗಳು ಸಮುದ್ರದ ಅಲೆಗಳಂತೆ ತೇಲಿ ಹೋಗದಿರಲಿ ಎಂದು ಹೇಳಿದರು. ಇದೇ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ 35ನೇ ಸಮ್ಮೇಳನದಲ್ಲಿ ಕಡಲು ಹಾಗೂ ನದಿಗಳ ಸಂಗಮ ಪ್ರದೇಶವಾದ ಹಳೆ ಬಂದರು ಧಕ್ಕೆಯಲ್ಲಿ ರಾಣಿ ಅಬ್ಬಕ್ಕ ನೌಕೆಯು (ಕ್ರೂಸ್) ಫಾಲ್ಗುಣಿ ನದಿಯಲ್ಲಿ ಸಾಗುತ್ತಾ, ನೇತ್ರಾವತಿ ನದಿ ಹಾಗೂ ಸಮುದ್ರದ ಮೂಲಕ ಸಾಗುತ್ತಾ ವಿಶೇಷ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು.
ಸುಮಾರು 100ಕ್ಕೂ ಅಧಿಕ ಪತ್ರಕರ್ತರು ಹಾಗೂ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ್ ಹೆಗಡೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಕರಾವಳಿಗೆ ಸಮುದ್ರ ಹಾಗೂ ನದಿಗಳು ಬಹು ದೊಡ್ಡ ಸಂಪತ್ತಾಗಿದೆ. ಆದರೆ ಇತರ ರಾಜ್ಯಗಳಲ್ಲಿ ಅಭಿವೃದ್ಧಿ ಯಾಗಿರುವ ಪ್ರವಾಸೋದ್ಯಮ ನಮ್ಮಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಕರಾವಳಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕ್ರೆಡೆಯ್ ಅಧ್ಯಕ್ಷ ಡಿ.ಬಿ. ಮೆಹ್ತಾ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.