ಪುತ್ತೂರು: 15 ವರ್ಷಗಳ ಹಿಂದೆ ಮಳೆಗಾಲದಲ್ಲಿ ಈ ಅಡಕೆ ಮರದ ಸೇತುವೆಯಿಂದ ನಡೆದು ಹೋಗುತ್ತಿದ್ದ 15 ವರ್ಷದ ಬಾಲಕನೊಬ್ಬ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ. ಇದುವರೆಗೂ ಆತನ ಮೃತದೇಹ ಪತ್ತೆಯಾಗಿಲ್ಲ. ಬಳಿಕ ಈ ತೋಡಿಗೆ ಕಾಂಕ್ರೀಟ್ ಸೇತುವೆ ನಿರ್ಮಾಣಗೊಂಡಿದ್ದರೂ ಸೇತುವೆ ಜರಿದು ಬಿದ್ದು, ಮತ್ತದೇ ಅಡಿಕೆ ಮರದ ಹಾಸು ಬಳಕೆ ಮಾಡುವ ಮೂಲಕ ಹಿಂದಿನ ಘಟನೆಯನ್ನು ನೆನಪಿಸುತ್ತಾರೆ ಸ್ಥಳೀಯರು.
ಇದು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ವಾಲ್ತಾಜೆ ಎಂಬಲ್ಲಿ ಕೆದಿಲ - ಕಬಕ ಗ್ರಾಮವನ್ನು ಸಂಪರ್ಕಿಸುವ ಸೇತುವೆಯ ವ್ಯಥೆ. ಸುಮಾರು 35 ವರ್ಷಗಳಷ್ಟು ಹಳೆಯದಾದ ಈ ಸೇತುವೆಯ ಸ್ಲ್ಯಾಬ್ ಇದೀಗ ಒಂದು ಭಾಗದಿಂದ ಮುರಿದು ಬಿದ್ದಿದ್ದು, ಮುರಿದು ಬಿದ್ದ ಜಾಗಕ್ಕೆ ಅಡಕೆ ಮರವನ್ನು ಹಾಸಲಾಗಿದೆ. ಈ ಸೇತುವೆ ಮತ್ತಷ್ಟು ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಬಿರುಕು ಬಿಟ್ಟಿದೆ.
ನಡೆದು ಹೋಗುವವರಿಗೆ ಈ ಕೆದಿಲ - ಕಬಕ ರಸ್ತೆ ಮೂಲಕ ನಗರಕ್ಕೆ ಕೇವಲ ಎರಡು ಕಿ.ಮೀ.ನಲ್ಲಿ ಕ್ರಮಿಸಬಹುದು. ಆದರೆ, ವಾಹನದಲ್ಲಿ ತೆರಳುವವರಿಗೆ ಕೆದಿಲ - ಮುರುವ ಮೂಲಕ ಸಾಗಿದರೆ ಏಳೆಂಟು ಕಿ.ಮೀ. ಸಾಗಬೇಕು. ಈ ಮಳೆಗಾಲದಲ್ಲಿ ಈ ಸೇತುವೆ ಸಂಪೂರ್ಣ ಕೊಚ್ಚಿಹೋಗುವುದಂತೂ ಗ್ಯಾರಂಟಿ. ಆದ್ದರಿಂದ ಆದಷ್ಟು ಬೇಗ ಇಲ್ಲಿ ರಕ್ಷಣಾ ಬೇಲಿ ಸಹಿತ ನೂತನ ಸೇತುವೆ ನಿರ್ಮಾಣಗೊಳ್ಳಬೇಕು ಎಂಬುದು ಸ್ಥಳೀಯರ ಬೇಡಿಕೆ.
ಇನ್ನೊಂದೆಡೆ ಕೆದಿಲ ಗ್ರಾಮದ ಮುರುವ - ಪೇರಾಜೆ - ಬಳ್ಳಮಜಲು ಈ ಮೂರು ಗ್ರಾಮಗಳನ್ನು ಸಂದಿಸುವ ಅಡಕೆ ರಕ್ಷಣಾ ಬೇಲಿ ಇಲ್ಲದ ಮರದ ಕಾಲುಸೇತುವೆಯಲ್ಲಿ ನೂರಾರು ಗ್ರಾಮಸ್ಥರು ಸಹಿತ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವ ಪರಿಸ್ಥಿತಿ.
ಸುಮಾರು 15 ಅಡಿಗಿಂತಲೂ ಎತ್ತರದಲ್ಲಿ ನಿರ್ಮಿಸಿದ ಈ ಸೇತುವೆ ಇಕ್ಕೆಲಗಳಲ್ಲಿ ಗುಡ್ಡ ಜರಿಯುವ ಭೀತಿ ಇನ್ನೊಂದು. ಈ ಹಿಂದೆ ಹಲವು ಬಾರಿ ಈ ಸೇತುವೆಯಿಂದ ಕೆಳಗೆ ಬಿದ್ದು ಮಾರಣಾಂತಿಕ ಗಾಯಗೊಂಡ ನಿದರ್ಶನಗಳು ಇದೆ. ಪರಿಣಾಮ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ದುಬಾರಿ ವೆಚ್ಚ ಮಾಡಿ ಮಕ್ಕಳನ್ನು ಖಾಸಗಿ ವಾಹನಗಳಲ್ಲಿ ಕಳುಹಿಸುತ್ತಿದ್ದಾರೆ.
ಈ ಹಿಂದೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ನೀಡಿದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಂಜಿನಿಯರ್‌ಗಳು ಭೇಟಿ ನೀಡಿ ನೂತನ ಸೇತುವೆಯ ಭರವಸೆ ನೀಡಿದ್ದರೂ ಇಲ್ಲಿಯವರೆಗೆ ಈಡೇರಿಲ್ಲ. ಒಟ್ಟಾರೆ ಈ ಗ್ರಾಮದಲ್ಲಿ ಗ್ರಾಮ ಗ್ರಾಮಗಳನ್ನು ಸಂದಿಸುವ ಮೂರು ಸೇತುವೆಗಳ ಬೇಡಿಕೆಯನ್ನಿಟ್ಟಿದ್ದಾರೆ ಸ್ಥಳೀಯರು.
ಇದನ್ನು ಓದಿ: ದ.ಕ ಜಿಲ್ಲೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ, ವಹಿವಾಟಿಗೆ ಅವಕಾಶ.. ಸಚಿವ ಕೋಟ
ಇತ್ತೀಚೆಗೆ ಪುತ್ತೂರು ಶಾಸಕರು ಸಂಬಂಧಪಟ್ಟ ಲೋಕೋಪಯೋಗಿ ಇಲಾಖಾ ಇಂಜಿನಿಯರ್‌ಗಳ ಜತೆ ಭೇಟಿ ನೀಡಿ ಎರಡು ಸೇತುವೆ ನಿರ್ಮಿಸುವ ಭರವಸೆ ನೀಡಿದ್ದು, ಈ ಎರಡು ಸೇತುವೆಯನ್ನು ರಾಜ್ಯ ಸರಕಾರದ ಗ್ರಾಮಬಂಧು ಯೋಜನೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಈ ಕುರಿತು ಅಂದಾಜು ಪಟ್ಟಿ ತಯಾರಿಸುವಂತೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ.
ಸೇತುವೆ ನಿರ್ಮಿಸಿದ ಸಂದರ್ಭದಲ್ಲೇ ಈ ಸೇತುವೆಗೆ ರಕ್ಷಣಾ ಬೇಲಿ ನಿರ್ಮಿಸಿಲ್ಲ. ಇದೀಗ ಈ ಸೇತುವೆಯ ಒಂದು ಕಾಂಕ್ರಿಟ್ ಸ್ಲ್ಯಾಬ್ ಮುರಿದು ಬಿದ್ದಿದ್ದು, ಅಡಿಕೆ ಮರದ ಕಂಬಗಳನ್ನು ಹಾಸಲಾಗಿದೆ. ಇನ್ನೊಂದು ಬಿರುಕುಬಿದ್ದು ಬೀಳುವ ಸ್ಥಿತಿಯಲ್ಲಿದೆ. ಒಂದು ವೇಳೆ ಇಡೀ ಸೇತುವೆ ಮುರಿದು ಬಿದ್ದಲ್ಲಿ ಸಂಪರ್ಕ ಅಸಾಧ್ಯ. ಕೆದಿಲ - ಕಬಕ ಈ ಎರಡೂ ಗ್ರಾಮವನ್ನು ಸಂಪರ್ಕಿಸುವ ಈ ಸೇತುವೆ ತಕ್ಷಣ ನಿರ್ಮಿಸಬೇಕು. ಇತ್ತೀಚೆಗೆ ಶಾಸಕರ ಸಹಿತ ಲೋಕೋಪಯೋಗಿ ಇಂಜಿನಿಯರ್‌ಗಳು ಭೇಟಿ ನೀಡಿ ಸರ್ವೆ ಮಾಡಿ ಸೇತುವೆಯ ಭರವಸೆ ನೀಡಿದ್ದಾರೆ.
ಮಳೆಗಾಲದಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಸೇತುವೆ, ರಸ್ತೆಗಳನ್ನು ಸರ್ವಋತು ಸೇತುವೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಗ್ರಾಮಬಂಧು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಕಾಲುಸಂಕಗಳಿಗೆ ಪ್ರಥಮ ಆದ್ಯತೆ ನೀಡಿದೆ. ಈ ಯೋಜನೆಯನ್ನು ಶಾಲಾ ಸಂಪರ್ಕ ಎಂಬ ಶಿರೋನಾಮೆಯಡಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಈ ಆರ್ಥಿಕ ವರ್ಷದಲ್ಲಿ ಮೂರು ಕೋಟಿ ಅನುದಾನ ಮಂಜೂರು ಮಾಡಿದೆ.
ಇದೀಗ ಹಾನಿಗೊಳಗಾದ ಕೆದಿಲ-ಕಬಕ ಸಂದಿಸುವ ವಾಲ್ತಾಜೆ ಸೇತುವೆಗೆ 16 ಲಕ್ಷ ರೂ. ಹಾಗೂ ಮುರುವ - ಪೆರಾಜೆ - ಬಳ್ಳಮಜಲು ಗ್ರಾಮವನ್ನು ಸಂದಿಸುವ ಸೇತುವೆಗೆ 8.50 ಲಕ್ಷ ರೂ. ಅಂದಾಜು ಪಟ್ಟಿ ಬಂಟ್ವಾಳ ಲೋಕೋಪಯೋಗಿ ಇಲಾಖೆ ಮೂಲಕ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಎರಡು ಸೇತುವೆಯನ್ನು ಆದ್ಯತೆಯ ನೆಲೆಯಲ್ಲಿ ಪೂರ್ಣಗೊಳಿಸಿ ನಾಗರಿಕರಿಗೆ, ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಮಾಡಲಾಗುತ್ತದೆ.