ಮಂಗಳೂರು: ಹಿಂಸಾಚಾರದ ಬಳಿಕ ಮಂಗಳೂರು ನಗರದಾದ್ಯಂತ ಜಾರಿಯಲ್ಲಿರುವ ಕರ್ಫ್ಯೂ ಎರಡನೇ ದಿನವೂ ಮುಂದುವರೆದಿದೆ. ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಆಹಿತಕರ ಘಟನೆ ನಡೆಯದಂತೆ ಪೊಲೀಸರು ಸರ್ಪಗಾವಲು ಹಾಕಿದ್ದಾರೆ.
ನಗರದಲ್ಲಿ ಯಾವುದೇ ಖಾಸಗಿ ಬಸ್ ಸೇವೆ ಇಲ್ಲ. ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ. ಜೊತೆಗೆ ಜಿಲ್ಲೆಯಾದ್ಯಂತ ಮದ್ಯದ ಅಂಗಡಿಗಳನ್ನು ಕೂಡ ಬಂದ್ ಮಾಡಲಾಗಿದೆ.
ಇನ್ನು ಬೆಳಗ್ಗೆ 6ರಿಂದ 8 ಗಂಟೆಯವರೆಗೆ ನಗರದಲ್ಲಿ ಕರ್ಫ್ಯೂ ಸಡಿಲಿಕೆ ಮಾಡಿ ಜನರಿಗೆ ದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ಈ ವೇಳೆ ಜನ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಅಂಗಡಿಗಳಿಗೆ ಮುಗಿಬಿದ್ದರು.
ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳು ಮತ್ತು ಶಾಸಕರು, ಸಂಸದರ ಜೊತೆ ಸಭೆ ನಡೆಸಲಿದ್ದಾರೆ.