ಮಂಗಳೂರು: ನಿಂಬೆಹಣ್ಣು ತುಂಬಿದ್ದ ಪಿಕ್ಅಪ್ ವಾಹನದಲ್ಲಿ 40 ಕೆ.ಜಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ, ಇಬ್ಬರನ್ನು ಬಂಧಿಸಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಕಂಬಲ್ಲೂರು ನಿವಾಸಿ ಶಿಹಾಬುದ್ದೀನ್ ವಿ.ವಿ(32), ಕಾಡುಮೆನಿ ನಿವಾಸಿ ಲತೀಫ್(38) ಬಂಧಿತ ಆರೋಪಿಗಳು.
ನಗರದ ಕೊಟ್ಟಾರ ಚೌಕಿ ಚೆಕ್ಪೋಸ್ಟ್ ಬಳಿ ನಿನ್ನೆ ರಾತ್ರಿ 8 ಗಂಟೆಗೆ ಉರ್ವ ಪೊಲೀಸ್ ಸ್ಟೇಷನ್ ನಿರೀಕ್ಷಕ ಜೋತಿರ್ಲಿಂಗ ಹೊನಕಟ್ಟಿ ಹಾಗೂ ಸಿಬ್ಬಂದಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಮಹೇಂದ್ರ ಬೊಲೇರೊ ಪಿಕ್ಅಪ್ ವಾಹನದಲ್ಲಿ ನಿಂಬೆಹಣ್ಣು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ಪರಿಶೀಲನೆ ನಡೆಸಿದಾಗ 40 ಕೆ.ಜಿ ತೂಕದ ಗಾಂಜಾ ಪತ್ತೆಯಾಗಿದೆ.
ಈ ಬಗ್ಗೆ ಡಿಸಿಪಿ ಹರಿರಾಂ ಶಂಕರ್ ಮಾತನಾಡಿ, ಆರೋಪಿಗಳಿಬ್ಬರಿಂದ 40 ಕೆ.ಜಿ ಗಾಂಜಾ, ಪಿಕ್ಅಪ್ ವಾಹನ, ಎರಡು ಮೊಬೈಲ್ ಫೋನ್ ಸಹಿತ 11.17 ಲಕ್ಷ ರೂ. ಮೌಲ್ಯದ ವಸ್ತುಗಳ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ: ಬಿಪಿಸಿಎಲ್ ಪೆಟ್ರೋಲ್ ಬಂಕ್ನಲ್ಲಿ ದರೋಡೆ : ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ