ಮಂಗಳೂರು: ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಅಂಚೆ ಕಚೇರಿ ಸಮೀಪ ಅಕ್ರಮ ಚಟುವಟಿಕೆ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 1.236 ಕೆಜಿ ಹೈಡ್ರೋ ವೀಡ್ ಗಾಂಜಾ ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಎಂಬಿಬಿಎಸ್ ವಿದ್ಯಾರ್ಥಿನಿ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಒಂದು ದಿನವೂ ರಜೆ ಪಡೆಯದೇ ಕೋವಿಡ್ ಡ್ಯೂಟಿ ಮಾಡಿದ್ದಕ್ಕೆ ನನಗೆ ಸಿಕ್ಕಿದ್ದು ಏಟು: ಡಾ. ಪದ್ಮಕುಮಾರ್ ಬೇಸರ
ಮೂಲತಃ ಸುರತ್ಕಲ್ನಲ್ಲಿ ವಾಸವಾಗಿರುವ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಮಿನು ರಶ್ಮಿ ಹಾಗೂ ಕಾಸರಗೋಡು ಜಿಲ್ಲೆಯ ಉಪ್ಪಳದ ಅಜ್ಮಲ್ ಟಿ. ಬಂಧಿತ ಆರೋಪಿಗಳು.
ಗಾಂಜಾದ ಗಿಡವನ್ನು ಬಹಳ ಪ್ರತಿಕೂಲ ಹವಾಮಾನದಲ್ಲಿ ಒಣಗಿಸಿ ಹೈಡ್ರೋ ವೀಡ್ ಅನ್ನು ತಯಾರಿಸಲಾಗುತ್ತದೆ. ಇದನ್ನು ಹೊರದೇಶಗಳಲ್ಲಿ ಸಿದ್ಧಪಡಿಸಿ ಭಾರತ ಮತ್ತಿತರ ದೇಶಗಳಿಗೆ ರವಾನೆ ಮಾಡಲಾಗುತ್ತದೆ. ಇದು ಯುರೋಪ್ ದೇಶದಿಂದ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಡಾ.ನದೀರ್ ಎಂಬಾತ ಕಾಸರಗೋಡು ಮೂಲದ ವೈದ್ಯನಾಗಿದ್ದು, ಈತ ವಿದೇಶದಲ್ಲಿ ತಲೆ ಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ. ಮತ್ತೋರ್ವ ಆರೋಪಿ ಮಿನು ರಶ್ಮಿ ಹರಿಮಲ ಆಸ್ಪತ್ರೆಯಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಲ್ಲದೇ ವೈದ್ಯೆಯಾಗಿದ್ದಳು. ಈಕೆ ಡಾ.ನದೀರ್ ಸೂಚನೆಯಂತೆ ರೈಲು ಮಾರ್ಗವಾಗಿ ಅಜ್ಮಲ್ ಜೊತೆಗೆ ಬಂದು ದೇರಳಕಟ್ಟೆಯಲ್ಲಿರುವ ನದೀರ್ ಗೆಳೆಯರಿಗೆ ಈ ಹೈಡ್ರೋ ವೀಡ್ ಗಾಂಜಾ ನೀಡುತ್ತಿದ್ದಳು ಎಂದು ತಿಳಿದು ಬಂದಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಹೈಡ್ರೋ ವೀಡ್ನಲ್ಲಿ ಮಾಮೂಲಿ ಗಾಂಜಾಕ್ಕಿಂತ ಹತ್ತಾರು ಪಟ್ಟು ಹೆಚ್ಚು ನಶೆ ಏರಿಸುವ ಶಕ್ತಿ ಇರುತ್ತದೆ. ಆರೋಪಿಗಳಿಂದ 1 ಕೋಟಿ ರೂ.ವರೆಗೆ ಹೈಡ್ರೋ ವೀಡ್ ಸಹಿತ ಒಂದು ಕಾರು, ಎರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Corona ತಂದಿಟ್ಟ ಸಂಕಟ: ಆನೇಕಲ್ನಲ್ಲಿ ತಂದೆ, ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣು
ಮಂಗಳೂರು ಹಾಗೂ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ಈ ಹೈಡ್ರೋ ವೀಡ್ ಗಾಂಜಾ ಮಾರಾಟ ಮಾಡಲು ಯತ್ನಿಸಲಾಗುತ್ತಿತ್ತು. ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇವರಲ್ಲಿ ಓರ್ವನನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ.