ಚಿತ್ರದುರ್ಗ: ಪುಂಡರ ರ‍್ಯಾಗಿಂಗ್ ಕಾಟಕ್ಕೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಕೋಡಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಯುವತಿ ರಾಧಿಕಾ(19) ರ‍್ಯಾಗಿಂಗ್ ಕಾಟಕ್ಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.
ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ರಾಧಿಕಾ ನಿತ್ಯ ಕಾಲೇಜಿಗೆ ಹೋಗಿ ಬರುತ್ತಿದ್ದಾಗ ಪುಂಡರ ಕಿರುಕುಳಕ್ಕೆ ಬೇಸತ್ತಿದ್ದಳು. ಇದನ್ನು ಪೋಷಕರ ಗಮನಕ್ಕೂ ತಂದಿದ್ದಾರೆ. ಈ ವೇಳೆ ಪೋಷಕರು ಪುಡಾರಿ ಯುವಕರಿಗೆ ಎಚ್ಚರಿಕೆ ಕೂಡ ನೀಡಿದ್ದರು.
ಆದರೂ, ರ‍್ಯಾಗಿಂಗ್ ಮಾಡುವುದನ್ನು ನಿಲ್ಲಿಸದ ಯುವಕರು ಕಾಲೇಜಿಗೆ ಬರುತ್ತಿದ್ದ ಯುವತಿಯರನ್ನು ಛೇಡಿಸುತ್ತಲೇ ಇದ್ದರು. ಇದರಲ್ಲಿ ರಾಧಿಕಾ ಕೂಡ ಒಬ್ಬರಾಗಿದ್ದರು. ಪುಡಾರಿಗಳ ರ್ಯಾಗಿಂಗ್ಗೆ ನೊಂದಿದ್ದ ಯುವತಿ ರಾಧಿಕಾ ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯುವತಿಯ ಸಾವಿನಿಂದ ಗ್ರಾಮಸ್ಥರೆಲ್ಲರೂ ಸೇರಿ ಪ್ರತಿಭಟನೆ ನಡೆಸಿದರು. ಅಲ್ಲದೇ, ಪುಂಡ ಯುವಕರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದರೂ, ಪ್ರತಿಭಟನೆ ಕೈಬಿಡದ ಗ್ರಾಮಸ್ಥರು ಯುವತಿಯ ಸಾವಿಗೆ ಕಾರಣರಾದವರನ್ನು ಬಂಧಿಸಲೇಬೇಕು ಎಂದು ಪಟ್ಟು ಹಿಡಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆಗೆ ಮರ್ಮಾಂಗ ತೋರಿಸಿದ ಆರೋಪ: ಹೆಡ್ಕಾನ್ಸ್ಟೇಬಲ್ ಅಮಾನತು
ಬಳಿಕ ಗ್ರಾಮಸ್ಥರನ್ನು ಪೊಲೀಸರು ಒಪ್ಪಿಸುವಲ್ಲಿ ಸಫಲರಾಗಿದ್ದಾರೆ. ಆದರೆ, 24 ಗಂಟೆ ಕಳೆದರೂ ಪುಂಡರನ್ನು ಬಂಧಿಸದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.