ಚಿತ್ರದುರ್ಗ: ಹೊಸ ವರ್ಷದ ಆಚರಣೆ ಮುಗಿಸಿಕೊಂಡು ಮರಳಿ ಬರುತ್ತಿದ್ದಾಗ ಬೈಕ್ ಅಪಘಾತವಾಗಿ ಓರ್ವ ಯುವಕ ಬಲಿಯಾಗಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೊಳಕಾಲ್ಮೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಧರ್ಮೇಂದ್ರ (25) ಮೃತ ದುರ್ದೈವಿಯಾಗಿದ್ದು, ದಿಲೀಪ್ (22) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರ್ಷಾಚರಣೆ ಗುಂಗಿನಲ್ಲಿದ್ದ ಯುವಕರು ತಡರಾತ್ರಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ವರ್ಷಾಚರಣೆಯ ಸಂಭ್ರಮ ಮುಗಿಸಿಕೊಂಡು ವಾಪಸ್ ಮೊಳಕಾಲ್ಮೂರು ಪಟ್ಟಣಕ್ಕೆ ಹೋಗುತ್ತಿದ್ದಾಗ ಬೈಕ್ ಅಪಘಾತವಾಗಿದೆ ಎನ್ನಲಾಗಿದೆ. ಗಾಯಾಳನ್ನು ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎನ್ನಲಾಗ್ತಿದೆ.