ಚಿತ್ರದುರ್ಗ: ಸರ್ಕಾರಿ ನೌಕರಿ ಸಿಗದೆ ಮನನೊಂದ ವಿವಾಹಿತೆ ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಮಸಮುದ್ರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿವಾಹಿತೆಯನ್ನು ಉಷಾ (22) ಎಂದು ಗುರುತಿಸಲಾಗಿದೆ.
ನನ್ನ ಸಾವಿಗೆ ಕುಟುಂಬ ಕಾರಣ ಅಲ್ಲ, ವ್ಯವಸ್ಥೆ ಕಾರಣ ಎಂದು ಡೆತ್ನೋಟ್ ಯುವತಿ ಉಲ್ಲೇಖ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪರಶುರಾಮಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆ ಹಿನ್ನೆಲೆ: ಸರ್ಕಾರಿ ನೌಕರಿಗಾಗಿ ಪ್ರಯತ್ನಿಸುತ್ತಿದ್ದ ಉಷಾ ಕೆಲ ತಿಂಗಳ ಹಿಂದೆ ಕೋರ್ಟ್ನಲ್ಲಿನ ಹುದ್ದೆಯೊಂದಕ್ಕೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಪೊಲೀಸ್ ವೆರಿಫಿಕೇಷನ್ ಹಂತದಲ್ಲಿತ್ತು. ಆದರೆ ಇದೇ ಸಂದರ್ಭದಲ್ಲಿ ಅಂದ್ರೆ ಫೆ.13ರಂದು ಜಮೀನಿನಲ್ಲಿ ನಡೆದ ಜಗಳವೊಂದರ ಸಂಬಂಧ ಉಷಾ ತಾಯಿಯ ಮನೆಯವರ ಮೇಲೆ ಪಕ್ಕದ ಜಮೀನಿನ ವ್ಯಕ್ತಿ ನಾಗರಾಜ್ ಎಂಬುವರು ದೂರು ನೀಡಿದ್ದ. ದೂರಿನಲ್ಲಿ ಉಷಾ, ಅವರ ತಾಯಿ ಸೇರಿದಂತೆ ಐವರ ಮೇಲೆ ಪ್ರಕರಣ ದಾಖಲಾಗಿತ್ತು.
ಹೀಗಾಗಿ ಕೋರ್ಟ್ ನೌಕರಿ ಸಿಗುವುದಿಲ್ಲ ಎಂಬುದು ಕುಟುಂಬಕ್ಕೆ ಗೊತ್ತಾಗಿದೆ. ಬಳಿಕ ಉಷಾ ಕುಟುಂಬದವರು ದೂರು ನೀಡಿದ ನಾಗರಾಜ್ ಬಳಿ ರಾಜಿ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಆದರೆ ಎಷ್ಟೇ ಅಂಗಲಾಚಿದರೂ ನಿರಾಕರಿಸಿದ ದೂರುದಾರ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳಿಸಿದ್ದರಂತೆ.
ಇದಾದ ಮರುದಿನ ಅಂದರೆ ಆ. 22ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಉಷಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೊಲಕ್ಕೆ ಹೋಗಿದ್ದ ಮೃತಳ ತಾಯಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇದೇ ವರ್ಷ ಏಪ್ರಿಲ್ನಲ್ಲಿ ಉಷಾಗೆ ಮದುವೆ ಮಾಡಲಾಗಿತ್ತು. ಈ ಬಗ್ಗೆ ವಿವಾಹಿತೆಯ ತಾಯಿ ನೀಡಿದ ದೂರಿನಂತೆ ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಶೆಯಲ್ಲಿ ಮೈತುಂಬಾ ಕಚ್ಚಿದ್ಲು ಮದನಾರಿ.. ಪತ್ನಿ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆಗೆ ಓಡೋಡಿ ಬಂದ ಪತಿ