ಚಿತ್ರದುರ್ಗ: ಕಾರ್ಮಿಕ ಇಲಾಖೆಯ ಸೂಚನೆಯಂತೆ ಯಾವುದೇ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದು ಹಾಗೂ ವೇತನ ಕಡಿತಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅವರು ಜಿಲ್ಲೆಯ ಎಲ್ಲ ಸಂಸ್ಥೆಗಳು, ಕಾರ್ಖಾನೆಗಳ ಮಾಲೀಕರು, ಆಡಳಿತ ವರ್ಗದವರಿಗೆ ಸೂಚಿಸಿದರು.
ಕೊರೊನಾ ವೈರಸ್ ಸಮಾಜಕ್ಕೆ ಒಂದು ಸವಾಲಾಗಿ ಪರಿಣಮಿಸಿದೆ. ಸೋಂಕು ತಡೆಗಟ್ಟುವ ದೃಷ್ಟಿಯಿಂದ ಎಲ್ಲರೂ ಮನೆಯಲ್ಲಿ ಇರಬೇಕು. ಹೊರ ಹೋಗದಂತೆ ಲಾಕ್ಡೌನ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಂಪೂರ್ಣ ಬಂದ್ ಘೋಷಣೆಯಾಗಿದೆ.
ಈ ನೆಪದಲ್ಲಿ ಆಡಳಿತ ವರ್ಗದವರು, ಮಾಲೀಕರು ಕಾರ್ಮಿಕರನ್ನು ವಜಾ ಮಾಡಬಹುದು ಅಥವಾ ವೇತನವಿಲ್ಲದೇ ರಜೆ ಮೇಲೆ ಹೋಗುವಂತೆ ಒತ್ತಾಯಿಸುವಂತಹ ಘಟನೆಗಳು ಜರುಗುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ಮಾಲೀಕರು ಕೆಲಸಗಾರರನ್ನು ಅಥವಾ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದು. ವೇತನ ಕಡಿತಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.