ಚಿತ್ರದುರ್ಗ: ನಗರದಲ್ಲಿ ಅ.14 ರಂದು ವಿಷಪ್ರಾಶನ ಮಾಡಿಸಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದ ಮೊಳಕಾಲ್ಮೂರು ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಅ.14 ರಂದು ಜಿಲ್ಲೆಯ ಮೊಳಕಾಲ್ಮೂರಿನ ಕನಕಯ್ಯನಹಟ್ಟಿಯ ನಿವಾಸಿ ಗೋಪಾಲ ಎಂಬ ವ್ಯಕ್ತಿಗೆ ವಿಷಪ್ರಾಶನ ಮಾಡಿಸಿ ಹತ್ಯೆ ಮಾಡಲಾಗಿತ್ತು. ಬಳಿಕ ಕುಡಿದ ಅಮಲಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಹತ್ಯೆ ಬಳಿಕ ಖಾಸಗಿ ಐಟಿಐ ಕಾಲೇಜು ಆವರಣದಲ್ಲಿ ಶವವನ್ನು ಬೈಕಿನಲ್ಲಿ ತಂದು ಬಿಟ್ಟುಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಜಾಡು ಹಿಡಿದ ಪೊಲೀಸರು ಆರೋಪಿಗಳ ಹೆಡೆಮುರಿಕಟ್ಟಲು ಅನುಕೂಲವಾಗಿದೆ ಎನ್ನುತ್ತಾರೆ ಪೊಲೀಸರು.
ಮೃತ ಗೋಪಾಲನ ಪತ್ನಿ ಯಶೋಧಾ ಹಾಗೂ ತಿಪ್ಪೇಶ ಮತ್ತು ಹುಲಿಕುಂಟ ಎಂಬುವರ ಮೇಲೆ ಕೊಲೆ ಆರೋಪ ಕೇಳಿ ಬಂದಿತ್ತು. ಹೀಗಾಗಿ ಯಶೋಧಾಳನ್ನು ಪೊಲೀಸರು ವಿಚಾರಣೆ ನಡೆಸಿದ್ದು, ತಿಪ್ಪೇಶ್ ಜತೆ ಯಶೋಧಾ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆ ಈ ಮೂವರು ಸೇರಿಕೊಂಡು ಗೋಪಾಲನ ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ ಎಂದು ಚಿತ್ರದುರ್ಗ ಎಸ್ಪಿ ಡಾ.ಅರುಣ್ ಮಾಹಿತಿ ನೀಡಿದ್ದಾರೆ.
ಇನ್ನು ಆರೋಪಿಗಳಾದ ತಿಪ್ಪೇಶ್ ಹಾಗೂ ಹುಲಿಕುಂಟನಿಗಾಗಿ ಮೊಳಕಾಲ್ಮೂರು ಪೊಲೀಸರು ಶೋಧ ಮುಂದುವರೆಸಿದ್ದಾರೆ.