ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ವೇದಾವತಿ ನದಿ ಪಾತ್ರದ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ವಾಣಿವಿಲಾಸ ಸಾಗರ ಜಲಾಶಯದಿಂದ ವೇದಾವತಿ ನದಿ ಮೂಲಕ ಏ. 22ರಿಂದ ನೀರು ಹರಿಸಲು ನಿರ್ಧರಿಸಲಾಗಿದೆ. ನದಿ ಪಾತ್ರದಲ್ಲಿ ಬರುವ ಗ್ರಾಮಗಳ ಜನರು ಮತ್ತು ಜಾನುವಾರುಗಳ ಸುರಕ್ಷತೆಗಾಗಿ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಚಳ್ಳಕೆರೆ ತಾಲೂಕಿನ ವೇದಾವತಿ ನದಿ ತೀರದಲ್ಲಿರುವ ಹಳ್ಳಿಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ವೇದಾವತಿ ನದಿಗೆ ವಿವಿ ಸಾಗರ ಜಲಾಶಯದಿಂದ 0.25 ಟಿಎಂಸಿ ನೀರನ್ನು ಏಪ್ರಿಲ್ 22ರಿಂದ ಬಿಡಲು ಕಳೆದ ತಿಂಗಳು ಜರುಗಿದ ಕುಡಿಯುವ ನೀರು ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿ ಆದೇಶ ನೀಡಲಾಗಿತ್ತು.
ಚಳ್ಳಕೆರೆ ಮತ್ತು ಹಿರಿಯೂರು ತಾಲೂಕು ಕಾತ್ರಿಕೆನಹಳ್ಳಿ ಅಣೆಕಟ್ಟು ಮುಖಾಂತರ ವೇದಾವತಿ ನದಿ ದಡದಲ್ಲಿರುವ ಲಕ್ಕವನಹಳ್ಳಿ, ಕಸವಬಹಳ್ಳಿ, ಹಳೆಯಳನಾಡು, ಕೊಡ್ಲಹಳ್ಳಿ, ಓಬೇನ ಹಳ್ಳಿಗಳಿಗೆ ನೀರು ಸರಾಗವಾಗಿ ಹರಿದು ಚಳ್ಳಕೆರೆ ತಾಲೂಕಿಗೆ ತಲುಪುವಂತೆ ಮಾಡಲು ಸಣ್ಣ ನೀರಾವರಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.