ಚಿತ್ರದುರ್ಗ: ದೊಡ್ಡ ನಗರಗಳಿಗೆ ಸಿಮೀತವಾಗಿದ್ದ ಅಕ್ರಮ ಗಾಂಜಾ ಮಾರಾಟ ಧಂದೆ ಬಹುಬೇಗನೆ ಇದೀಗ ಚಿತ್ರದುರ್ಗಕ್ಕೂ ಕಾಲಿಟ್ಟಿದೆ. ಆದರೆ ಅಷ್ಟೇ ವೇಗವಾಗಿ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡ ದಂಧೆಕೋರರು, ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಪಿಐ ಎಂಡಿ ಫೈಜುಲ್ಲಾ ನೇತೃತ್ವದಲ್ಲಿ ಚಿತ್ರದುರ್ಗ ನಗರದ ಅಂಜುಮಾನ್ ವೃತ್ತದಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಚಿತ್ರದುರ್ಗ ನಗರದ ಮಠದ ಕುರುಬರಹಟ್ಟಿಯ ಶಾಹೀನ್ (32), ಹೊರಪೇಟೆಯ ಸೈಯದ್ ಸಮೀವುಲ್ಲಾ (44) ಬಂಧಿತರು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳಿಂದ 1ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಸಂಬಂಧ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.