ಚಿತ್ರದುರ್ಗ: ಕುಡಿಯುವ ನೀರಿನ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಎರಡೂ ಬಣಗಳ ಜಿಲ್ಲಾ ಅಧ್ಯಕ್ಷರು, ಕಾರ್ಯಕರ್ತರು ಬಡಿದಾಡಿಕೊಂಡಿರುವ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.
ಚಿತ್ರದುರ್ಗ ನಗರಸಭೆ ಸದಸ್ಯೆಯ ಪತಿ ಕರವೇ ನಾರಾಯಣಗೌಡರ ಬಣದ ಜಿಲ್ಲಾ ಅಧ್ಯಕ್ಷ ರಮೇಶ್ ತಮ್ಮ ಪತ್ನಿ ಪ್ರತಿನಿಧಿಸುವ 20ನೇ ವಾರ್ಡ್ನಲ್ಲಿ ಪೈಪ್ಲೈನ್ ಅಳವಡಿಸುತ್ತಿದ್ದ ವೇಳೆ ಗಲಾಟೆ ನಡೆದಿದೆ ಎನ್ನಲಾಗಿದೆ. ನಾವು ಶಾಸಕರ ಮೇಲೆ ಒತ್ತಡ ಹೇರಿ ಹಾಕಿಸಿದ್ದ ಬೋರ್ವೆಲ್ಗೆ ಕಬ್ಬಿಣದ ಪೈಪ್ಲೈನ್ ಅಳವಡಿಸುವ ಮೂಲಕ ಸುತ್ತಮುತ್ತಲಿನ ಮನೆಗಳವರಿಗೆ ನೀರು ಸಿಗದಂತೆ ಮಾಡಿದ್ದಾರೆ. ಅದನ್ನು ಕೇಳಲು ಹೋದ ನನ್ನ ಮತ್ತು ನಮ್ಮ ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ಮಂಜುನಾಥ್ ಆರೋಪಿಸಿದ್ದಾರೆ.
ಮತ್ತೊಂದೆಡೆ ನಾನು ಜನರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವಾಗ ರೌಡಿ ಮಂಜುನಾಥ್ ಎಂಬಾತ ನನ್ನ ಮತ್ತು ನಮ್ಮ ಕುಟುಂಬದವರು ಹಾಗೂ ನನ್ನ ಬೆಂಬಲಿಗರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ರಮೇಶ್ ಪ್ರತ್ಯಾರೋಪ ಮಾಡಿದ್ದಾರೆ.
ಸದ್ಯ ಎರಡೂ ಬಣದ ಅಧ್ಯಕ್ಷರು ಹಾಗೂ ಬೆಂಬಲಿಗರು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.