ಚಿತ್ರದುರ್ಗ : ನೆರೆ ಜಿಲ್ಲೆಯಿಂದ ಕರ್ತವ್ಯಕ್ಕೆ ಆಗಮಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲೆಯ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ವಿನೋತ್ ಪ್ರಿಯಾ ಆದೇಶಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಲಾಕ್‍ಡೌನ್ ವಿಸ್ತರಣೆ ಕುರಿತ ಸಲಹೆ, ಮಾರ್ಗಸೂಚಿಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಗಳನ್ನು ಹಸಿರು, ಕೆಂಪು ಮತ್ತು ಕಿತ್ತಳೆ ವಲಯಗಳನ್ನಾಗಿ ವಿಂಗಡಿಸಲಾಗಿದೆ. ಜಿಲ್ಲೆಯು ಎಲ್ಲರ ಸಹಕಾರದಿಂದ ಹಸಿರು ವಲಯದಲ್ಲಿ ಗುರುತಿಸಿಕೊಂಡಿದೆ ಎಂದರು.
ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಜಿಲ್ಲೆಯ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಹೊರ ಜಿಲ್ಲೆಯಿಂದ ಜಿಲ್ಲೆಗೆ ಬರುವಂತಿಲ್ಲ. ಅಗತ್ಯವಿದ್ದರೆ ಬೇರೆ ಜಿಲ್ಲೆಯಿಂದ ಆಗಮಿಸುವ ಅಧಿಕಾರಿಗಳಿಗೆ ಕ್ವಾರಂಟೈನ್ ಮಾಡಲಾಗುವುದು. ಈಗಾಗಲೇ ಬೇರೆ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿ, ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಹಾಗೂ ಸಿಬ್ಬಂದಿ ಪಟ್ಟಿ ಸಿದ್ದಪಡಿಸಲಾಗುತ್ತಿದೆ ಎಂದರು.
ಎರಡು ಬಾರಿ ಆದೇಶ ನೀಡಲಾಗಿದ್ದು, ನಿಯಮ ಉಲ್ಲಂಘಿಸಿದರೆ ಇಲಾಖಾ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಹೊರ ಜಿಲ್ಲೆಗೆ ತೆರಳುವವರು ಪಾಸ್ ತೆಗೆದುಕೊಂಡು ಹೋಗಬಹುದು ಎಂದರು.