ಚಿತ್ರದುರ್ಗ: ಮಹಿಳೆ ಕೈಗೆ ಚಾಕು ಇರಿದು ಮಾಂಗಲ್ಯ ಸರ ಕಸಿದು ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕರೀಕೆರೆ ಗ್ರಾಮ ಬಳಿ ಬೈಕಿನಲ್ಲಿ ಬಂದ ಇಬ್ಬರು ಖದೀಮರು ಈ ದುಷ್ಕೃತ್ಯ ಎಸಗಿದ್ದು, ಕರೀಕೆರೆ ಗ್ರಾಮದ ನಿವಾಸಿ ವರಲಕ್ಷ್ಮೀ ಕೊರಳಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. 1.40 ಲಕ್ಷ ರೂ ಬೆಲೆಬಾಳುವ 45 ಗ್ರಾಂ ಚಿನ್ನದ ಸರ ಕದ್ದು ಕಳ್ಳರು ಕಾಲ್ಕಿತ್ತಿದ್ದು, ಪತಿ ಶಿವಣ್ಣ ಜತೆ ಬೈಕಲ್ಲಿ ಗ್ರಾಮಕ್ಕೆ ಮರಳುವ ವೇಳೆ ಅಡ್ಡಗಟ್ಟಿ ಈ ಕೃತ್ಯ ಎಸಗಲಾಗಿದೆ.
ಗಾಯಾಳು ವರಲಕ್ಷ್ಮೀಯನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಳ್ಳಕೆರೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಕಳ್ಳರಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.