ಚಿತ್ರದುರ್ಗ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ),ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಬಿಜೆಪಿಯವರಿಗೆ ಸರಿಯಾಗಿ ಗೊತ್ತಿಲ್ಲ. ಅಧಿಕಾರ ನಡೆಸುತ್ತಿರುವ ನಾಯಕರಿಗೆ ಅಲ್ಪಜ್ಞಾನವೂ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸಲ್ಮಾನರು ಹೆದರಿಲ್ಲ. ಇವಿಎಂ ಮಿಷನ್ ಬಿದ್ದ ಬಳಿಕ ಇದೀಗ ಬಿಜೆಪಿ ನಾಯಕರು ಮಾನವನನ್ನು ಇವಿಎಂ ಮಾಡಲು ಹೊರಟ್ಟಿದ್ದಾರೆ. ಈಗಾಗಲೇ ವಿಮಾನ ನಿಲ್ದಾಣಗಳ ಮಾರಾಟ ಶುರುವಾಗಿದೆ. ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿಗೆ ಕೊಟ್ಟಾಗಿದೆ. ಎಲ್ಲೆಲ್ಲಿ ಕರೆಯುವ ಹಸುಗಳಿದ್ದಾವೋ ಅವೆಲ್ಲಾ ಅಂಬಾನಿ, ಅದಾನಿಗೆ ಸೇರಿವೆ ಎಂದು ವ್ಯಂಗ್ಯವಾಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಹಿಂದೆ ಕಾಣದ ಕೈಗಳಿವೆ. ಮೋದಿ ಹಾಗೂ ಅಮಿತ್ ಶಾ ಕೈಯಲ್ಲಿ ಇದನ್ನೆಲ್ಲ ಮಾಡಿಸುತ್ತಿವೆ. ಇವತ್ತು ಈ ಕಾಯ್ದೆಯಿಂದ ನಿಮ್ಮ ತಾಯಿಯನ್ನ ತೋರಿಸಿ, ನಿಮ್ಮ ತಾಯಿ ಇವಳೇನಾ ಅಂತಾ ಕೇಳಿದ್ರೆ ಕೇಳ್ತಿರೋದು ಪ್ರತಿಯೊಬ್ಬರಿಗೆ ನೋವಾಗುತ್ತದೆ. ಹಾಗೇ ಈ ದೇಶದಲ್ಲಿ ಹುಟ್ಟಿದವರಿಗೆ ನಿಮ್ಮ ದೇಶ ಇದೇನಾ ಅಂತಾ ಕೇಳಿದ್ರೆ ಸಿಟ್ಟು ಬರೋದಿಲ್ವಾ ಅಂತಾ ಪ್ರಶ್ನಿಸಿದರು.
ಮುಸ್ಲಿಮರಿಗಿಂತಲೂ ಈ ಕಾಯ್ದೆಗಳು ಇನ್ನುಳಿದ ಶೇ. 60ರಷ್ಟು ಜನರಿಗೆ ತೊಂದರೆ ಮಾಡ್ತವೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರು ಬರೆದ ಸಂವಿಧಾನದ ಬದಲು ಗೋಲ್ವಾಲ್ಕರ್ ವಿಚಾರಧಾರೆಯಂತೆ ಮನುಸ್ಮೃತಿ ಜಾರಿಗೆ ತರಲು ಕೇಂದ್ರ ಬಿಜೆಪಿ ನಾಯಕರು ಹೊರಟಿದ್ದಾರೆ ಅಂತಾ ಇಬ್ರಾಹಿಂ ವಾಗ್ದಾಳಿ ನಡೆಸಿದರು.