ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ವಾಸ್ತವ್ಯ ಹೂಡಿದ್ದನ್ನು ಗಮನಿಸಿದ ವ್ಯಕ್ತಿಯೋರ್ವ, ಅವರನ್ನು ಭೇಟಿ ಮಾಡಲು ಮುಂದಾದಾಗ ಸಿಬ್ಬಂದಿ ಅವರನ್ನು ತಡೆದಿರುವ ಘಟನೆ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದೆ.
ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ, ಭ್ರಷ್ಟಾಚಾರದ ಬಗ್ಗೆ ದೂರು ಹೇಳಲು ಸಿದ್ದೇಶ್ ಎಂಬುವವರು ಮುಂದಾದಾಗ ಸಿಬ್ಬಂದಿ ಹಿಡಿದು ತಡೆದಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಸಿದ್ದೇಶ್ ತಂದೆ ವೀರಭದ್ರಪ್ಪ(61) ತೀರಿಕೊಂಡಿದ್ದರು. ನಂತರ ಸೂಕ್ತ ಚಿಕಿತ್ಸೆ ನೀಡದ ಕಾರಣ ಸಿದ್ದೇಶ್ ಪತ್ನಿ ಶೈಲಾ(28) ಗರ್ಭದಲ್ಲೇ ಮಗು ಸಾವನ್ನಪ್ಪಿದೆ. ಇವೆಲ್ಲದಕ್ಕೂ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನುವುದು ಸಿದ್ದೇಶ್ ಆರೋಪ.
ಇನ್ನು ಈ ಬಗ್ಗೆ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದ ಸಚಿವರಲ್ಲಿ ಸಮಸ್ಯೆ ಹೇಳಿಕೊಳ್ಳಲು ಮುಂದಾದಾಗ ಆಸ್ಪತ್ರೆಯ ಸಿಬ್ಬಂದಿ ತಡೆದು ವಾಪಸ್ ಕಳಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸಿದ್ದೇಶ್ ಮಾಧ್ಯಮ ಹೇಳಿಕೆ ನೀಡಿದ ಬಳಿಕ ಸಿಬ್ಬಂದಿ ಸಚಿವರನ್ನು ಭೇಟಿ ಮಾಡಿಸಿದ್ದು, ಈ ವೇಳೆ ಸಿದ್ದೇಶ್ ವೈದ್ಯರ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾನೆ. ಘಟನೆಗೆ ಸಂಬಂಧಪಟ್ಟಂತೆ ಸಚಿವರು ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.