ಚಿತ್ರದುರ್ಗ: ಕೊರೊನಾ ವಿರುದ್ಧ ಹೋರಾಡಲು ಬೇಕಾಗುವ ಅಗತ್ಯ ವಸ್ತುಗಳ ಖರೀದಿಯಲ್ಲಿ ಅವ್ಯವಹಾರ ಆಗಿರುವ ದಾಖಲೆ ಇದ್ದರೆ ಬಿಡುಗಡೆಗೊಳಿಸಿ ಎಂದು ಸಚಿವ ಶ್ರೀರಾಮುಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಸವಾಲು ಹಾಕಿದರು.
ಸಿದ್ದರಾಮಯ್ಯ 2 ಸಾವಿರ ಕೋಟಿ ರೂ. ಅವ್ಯವಹಾರವಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಅದರೆ ನಾವು 500 ಕೋಟಿ ರೂ. ಯಷ್ಟು ಮಾತ್ರ ಕೊರೊನಾ ಸಂಬಂಧ ವಸ್ತುಗಳನ್ನು ಖರೀದಿ ಮಾಡಿದ್ದೇವೆ. ಅದು ಹೇಗೆ ಅವ್ಯವಹಾರವಾಗುತ್ತೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಪ್ರಶ್ನಿಸಿದರು.
ಈ ಸಂಬಂಧ ನಿಮ್ಮ ಬಳಿ ದಾಖಲೆಗಳಿದ್ದರೆ ಬಹಿರಂಗಪಡಿಸಿ, ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ಸರ್ಕಾರದ ಹಣವನ್ನು ಯಾರೂ ತಿನ್ನಲು ಸಾಧ್ಯವಿಲ್ಲ. ಸುಮ್ಮನೆ ಜನರನ್ನು ಹಾದಿ ತಪ್ಪಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾಖಲೆ ಬಿಡುಗಡೆ ಮಾಡಿದಕ್ಕಾಗಿ ಅಂದು ರೆಡ್ಡಿ ಬ್ರದರ್ಸ್ ಜೈಲು ಸೇರಿದ್ದರು. ಇದೀಗ ಮತ್ತೆ ದಾಖಲೆ ಬಿಡುಗಡೆಯಾದರೆ ಜೈಲಿಗೆ ಹೋಗೋದು ಗ್ಯಾರಂಟಿ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಹಳೆ ಕಥೆಯನ್ನೇಕೆ ನೆನಪಿಸಿಕೊಳ್ಳುತ್ತೀರಿ?, ನಿಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ, ಯಾರು ಜೈಲಿಗೆ ಹೋಗಬೇಕೋ ಅವರು ಹೋಗಿಯೇ ಹೋಗುತ್ತಾರೆ ಎಂದರು.
'ನನ್ನ ನಡೆ ಹಳ್ಳಿ ಕಡೆ'
ಕೊರೊನಾ ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಕಾಲಿಡುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ನನ್ನ ನಡೆ ಹಳ್ಳಿ ಕಡೆ ಎಂದು ಜಾಗೃತಿ ಕಾರ್ಯ ಆರಂಭಿಸುತ್ತೇನೆ ಎಂದರು.
ಪತ್ರಕರ್ತರು ಕೂಡ ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಆಗಿದ್ದು, ಸಾಕಷ್ಟು ಜನ ಸೋಂಕಿಗೊಳಗಾಗಿದ್ದಾರೆ. ಆದರೆ ಅವರಿಗೆ ಅಗತ್ಯ ಇರುವ ಇನ್ಸ್ಯೂರೆನ್ಸ್ ಪಾಲಿಸಿ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದರು.