ಚಿತ್ರದುರ್ಗ : ಸದನದಲ್ಲಿ ಇಲ್ಲದೆ ಇರುವ ವ್ಯಕ್ತಿ ವಿರುದ್ಧ ಆರೋಪ ಮಾಡಿದ ಕರ್ನಾಟಕದ ಮೊದಲ ವ್ಯಕ್ತಿ ಅದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ. ಸಿಎಂ ಯಡಿಯೂರಪ್ಪನವರ ಮಗ ವಿಜಯೇಂದ್ರ ವಿಚಾರವಾಗಿ ಸಿದ್ದರಾಮಯ್ಯನವರ ಆರೋಪಕ್ಕೆ ಅವರು ತಿರುಗೇಟು ನೀಡಿದರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಸಿಎಂ ಪುತ್ರ ವಿಜಯೇಂದ್ರ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ಸದನದ ಕಾನೂನನ್ನು ಗಾಳಿಗೆ ತೂರಿ ಯಡಿಯೂರಪ್ಪನವರಿಗೆ ಹಾಗೂ ಸರ್ಕಾರಕ್ಕೆ ಕಳಂಕ ತರುವ ದುರುದ್ದೇಶದಿಂದ ವಿಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ಪ್ರಸ್ತಾಪಿಸಿದ್ದಾರೆ ಎಂದರು.
ತಮಗೆ ಡಿಸಿಎಂ ಸ್ಥಾನ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜನರು ಶ್ರೀರಾಮುಲುಗೆ ಒಳ್ಳೆಯದಾಗಬೇಕೆಂದು ಬಯಸುತ್ತಾರೆ. ಏನೇ ಸ್ಥಾನ ಕೊಟ್ಟರೂ ನಿಭಾಯಿಸುವ ಶಕ್ತಿ ಭಗವಂತ ನನಗೆ ನೀಡಿದ್ದಾನೆ. ಪಕ್ಷ ಯಾವ ತೀರ್ಮಾನ ಕೈಗೊಳ್ಳಲಿದೆಯೋ ಕಾದು ನೋಡೋಣ ಎಂದರು. ಬಸವಕಲ್ಯಾಣ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಚಾರ ಜೋರಾಗಿದೆ. ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದರು.